ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ವೈರಮುಡಿ ಬ್ರಹ್ಮೋತ್ಸ

ಮಂಡ್ಯ: ಮೇಲುಕೋಟೆಯಲ್ಲಿ ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ವೈರಮುಡಿ ಬ್ರಹ್ಮೋತ್ಸ ನಡೆಯಲಿದ್ದು,ಮಾರ್ಚ್ 28ರಂದು ವೈರಮುಡಿ ಕಿರೀಟಧಾರಣೆ ಮತ್ತು ಉತ್ಸವ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶ್ರೀ ವೈರಮುಡಿ ಬ್ರಹ್ಮೋತ್ಸವದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ ತಿಂಗಳಲ್ಲಿ ಉತ್ಸವ ನಡೆಯುತ್ತಿದೆ. ಆ ವೇಳೆ ಬೇಸಿಗೆ ಇರುವುದರಿಂದ ಬ್ರಹ್ಮೋತ್ಸವದ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಹಾಲಿ ಇರುವ ನೀರಿನ ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಿ ಎಂದು ಸೂಚಿಸಿದರು.

ವೈರಮುಡಿ ಬ್ರಹ್ಮೋತ್ಸವ ನಡೆಯುವ ಸ್ಥಳದಲ್ಲಿ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಿ. ಈಗಾಗಲೇ ಜನ‌ಸಂದಣಿ ಸೇರುವ ಕಡೆ ಸಿ.ಸಿ.ಟಿ.ವಿ ವ್ಯವಸ್ಥೆ ಇದೆ. ಅಗತ್ಯ ಇರುವ ಕಡೆ ಹೆಚ್ಚುವರಿ ಸಿ.ಸಿ ಟಿ ವಿ ಅಳವಡಿಸಿ. ವಾಹನಗಳ ನಿಲುಗಡೆಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ. ಕೊಳದ ಬಳಿ ನುರಿತ ಈಜು ಪಡೆ, ಅಗ್ನಿಶಾಮಕ ಸಿಬ್ಬಂದಿಗಳನ್ನು ನಿಯೋಜಿಸಿ ಎಂದು ನಿರ್ದೇಶನ ಆದೇಶಿಸಿದರು.

ಕ್ಷೇತ್ರದಲ್ಲಿ ಡ್ರೈನೇಜ್ ವ್ಯವಸ್ಥೆ ಕಲ್ಪಿಸಿ ಸ್ವಚ್ಚತೆ ಕಾಪಾಡಿ, ಆಂಬುಲೆನ್ಸ್, ಮೆಡಿಸಿನ್ ಗಳ ವ್ಯವಸ್ಥೆಯನ್ನು ಕಲ್ಪಿಸಿ. ಎಲ್ಲಾ ವಿದಧ ವೈದ್ಯರುಗಳು ಕಡ್ಡಾಯವಾಗಿ ನಿಗದಿ ಪಡಿಸಿದ ಸ್ಥಳದಲ್ಲಿ ಇರಬೇಕು. ಭಕ್ತರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಡಾ. ಕುಮಾರ ತಿಳಿಸಿದರು.

ಮೇಲುಕೋಟೆ ಕಲ್ಯಾಣ, ಬಸ್ ನಿಲ್ದಾಣ, ದೇವಾಲಯದ ಬಳಿ ಬಯೋ ಶೌಚಾಲಯಗಳನ್ನು ನಿರ್ಮಿಸಬೇಕು. ರಸ್ತೆಗಳ ದುರಸ್ತಿ ಮಾಡಿಸಿ. ವಿವಿಧ ತಾಲೂಕಿನಿಂದ ಬರುವ ಸಾರ್ವಜನಿಕರಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿಜತೆಗೆ ಪಾರ್ಕಿಂಗ್ ನಿಂದ ದೇವಾಲಯಕ್ಕೆ ಭಕ್ತಾದಿಗಳು ಸಂಚಾರಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.

ವೈರಮುಡಿ ಬ್ರಹ್ಮೋತ್ಸವ ಪ್ರಾರಂಭವಾಗಿ ಮುಗಿಯುವವರೆಗೂ ನಿರಂತರ ವಿದ್ಯುತ್ ಪೂರೈಕೆ ಮಾಡಿ. ಬೀದಿ ದೀಪಗಳ ದುರಸ್ತಿಗೊಳಿಸಿ ಎಂದು ಹೇಳಿದರು.

ಚೆಲುವನಾರಾಯಣ ಸ್ವಾಮಿ ದೇವಾಲಯ, ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯ ಹಾಗೂ ದೇವಾಲಯದ ವ್ಯಾಪ್ತಿಯ ಪ್ರಮುಖ ಮಂಟಪ ಹಾಗೂ ಕಲ್ಯಾಣಿಯಲ್ಲಿ ವಿಶೇಷ ದಿಪಾಲಂಕಾರ ಹಾಗೂ ಹೂವಿನ ಅಲಂಕಾರ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ, ವೈರಮುಡಿ ಬ್ರಹ್ಮೋತ್ಸವ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಅತಿ ಮುಖ್ಯ, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ವೈರುಮುಡಿ ಬ್ರಹ್ಮೋತ್ಸವಕ್ಕೆ ಭೇಟಿ ನೀಡುವ ಗಣ್ಯರು ಮತ್ತು ಅತಿ ಗಣ್ಯರಿಗೆ ಸೂಕ್ತ ಶಿಷ್ಟಾಚಾರ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಟಿ.ಎನ್ ನರಸಿಂಹಮೂರ್ತಿ, ಮುಜರಾಯಿ ತಹಶೀಲ್ದಾರ್ ತಮ್ಮೆಗೌಡ, ಪಾಂಡವಪುರ ಇ ಒ ವೀಣಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.