ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಇಲ್ಲ: ಡಾ.ಯತೀಂದ್ರ ಸಮರ್ಥನೆ

ಮೈಸೂರು: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ಇಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ನಂಜನಗೂಡಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿ‌ದ ಅವರು ಯಾವುದೇ ರಾಜಕೀಯ ಪಕ್ಷದಲ್ಲೂ ಅಲ್ಪಸ್ವಲ್ಪ ಅಸಮಾಧಾನಗಳು ಇದ್ದೇ ಇರುತ್ತವೆ.ಆದರೆ ದೊಡ್ಡ ಮಟ್ಟದ ಬಿರುಕು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ತಂದೆಯ ಹುಟ್ಟುಹಬ್ಬ ಆಚರಣೆ ಯಾವುದೇ ಬಲಪ್ರದರ್ಶನ ತೋರಿಸುವುದಕ್ಕಲ್ಲ ಎಂದು ಹೇಳಿದರು.

ಸಿದ್ದರಾಮಯ್ಯನವರಿಗೆ 75ವರ್ಷ ತುಂಬಿರುವುದು, 40ವರ್ಷದ ಸುದೀರ್ಘ ರಾಜಕೀಯ ಜೀವನದ ಸಾಧನೆ, ಅವರು ಮಾಡಿದ ಕೆಲಸದ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು,ಪಕ್ಷಾತೀತವಾಗಿ ಹಿರಿಯ ರಾಜಕಾರಣಿಗಳು ನಡೆಸುತ್ತಿರುವ ಸಿದ್ದರಾಮೋತ್ಸವ ಎಂದು ತಿಳಿಸಿದರು.

ಹಲವು ಕ್ಷೇತ್ರಗಳಲ್ಲಿ 2023ರ ಸಾರ್ವತ್ರಿಕ ಚುನಾವಣೆಗೆ ನಿಲ್ಲಲು ಸಿದ್ದರಾಮಯ್ಯ ಅವರನ್ನು ಕರೆಯುತ್ತಿದ್ದಾರೆ. ವರುಣ ಕ್ಷೇತ್ರದಲ್ಲಿ ನಿಲ್ಲಲು ಬಯಸಿದರೆ ಖಂಡಿತ ನಾನು ಆ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ ಎಂದು ಹೇಳಿದರು.

ಬೆಂಗಳೂರಿನ ಸುತ್ತಮುತ್ತ ಯಾವುದಾದರೂ ಒಂದು ಕ್ಷೇತ್ರ ಆಯ್ಕೆ ಮಾಡುವ ಸಾಧ್ಯತೆ ಕೂಡ ಇದೆ ಎಂದು ಯತೀಂದ್ರ ತಿಳಿಸಿದರು.