ಅವಧಿಗೆ ಮೊದಲೇ ಚುನಾವಣೆ ನಡೆಸಲು ಬಿಜೆಪಿ ಹವಣಿಕೆ

ಬೆಂಗಳೂರು: 2023ರ ಜುಲೈ ನಂತರ ನಡೆಯಬೇಕಿರುವ ರಾಜ್ಯ ವಿಧಾನಸಭೆ ಚುನಾವಣೆ ಈ ವರ್ಷದ ಡಿಸೆಂಬರ್‌ ನಲ್ಲೇ ನಡೆಯುವ ಸಾಧ್ಯತೆ ಹೆಚ್ಚಾಗಿದೆ

ಗುಜರಾಜ್‌ ಚುನಾವಣೆ ಡಿಸೆಂಬರ್‌ ನಲ್ಲೇ ನಡೆಯಲಿದ್ದು, ಅದರ ಜತೆಯಲ್ಲೇ ರಾಜ್ಯದ ಚುನಾವಣೆಯನ್ನು ಮುಗಿಸುವ ತವಕ ಬಿಜೆಪಿಗೆ.

ಅವಧಿಗೆ ಮುನ್ನವೇ ಚುನಾವಣೆ ನಡೆಸಿ ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿ,ಈಗಾಗಲೇ ಸಿದ್ಧತೆಯಲ್ಲಿ ತೊಡಗಿದೆ.

ಹೈದರಾಬಾದ್‌ʼನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ, ರಾಜ್ಯಸಭೆಗೆ ದಕ್ಷಿಣ ಭಾರತದ ನಾಲ್ವರು ಗಣ್ಯರ ನಾಮನಿರ್ದೇಶನ ಸೇರಿದಂತೆ ಕೆಲ ತಂತ್ರಗಳನ್ನು ಬಿಜೆಪಿ ಅನುಸರಿಸಿದೆ.

ಮೋದಿ ಅವರ ಅಣತಿಯಂತೆ ಡಿಸೆಂಬರ್‌ ನಲ್ಲೇ ವಿಧಾನಸಭೆ ಚುನಾವಣೆ ನಡೆಸುವುದು ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ.

ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ನೆಲೆ ಕಂಡುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ.

ಸದ್ಯಕ್ಕೆ ಕರ್ನಾಟಕದಲ್ಲಿರುವ ಅಧಿಕಾರವನ್ನು ಉಳಿಸಿಕೊಂಡು, ನಂತರ ತೆಲಂಗಾಣವನ್ನು ಟಾರ್ಗೆಟ್‌ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ತಂತ್ರವಾಗಿದೆ.

ಇದಾದ ನಂತರ ತಮಿಳುನಾಡು, ಕೇರಳವನ್ನು ಗೆಲ್ಲುವುದು ಅವರ ಉದ್ದೇಶವಾಗಿದೆ.

ಜುಲೈ ನಂತರ ಚುನಾವಣೆ ನಡೆಸುವುದಾಗಿದ್ದರೆ ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸುತ್ತಿದ್ದರು.

ಈಗ ಆ ನಿರ್ಧಾರವನ್ನು ಪಕ್ಕಕ್ಕಿಟ್ಟು, ಡಿಸೆಂಬರ್‌ ವರೆಗೆ ಅವರನ್ನೇ ಮುಂದುವರಿಸುವ ತೀರ್ಮಾನ ಕೈಗೊಂಡಿದೆ. ಹೀಗಾಗಿ ೨೦೨೩ರ ಜನವರಿ ಹೊತ್ತಿಗೆ ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುವುದು ಖಚಿತ ಎನ್ನಲಾಗುತ್ತಿದೆ.

ಬಿಜೆಪಿ ವೇಗಕ್ಕೆ ಸಮನಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕಾರ್ಯತಂತ್ರಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವಕ್ಕೆ ಸಿದ್ದರಾಗಿದ್ದರೆ, ಜೆಡಿಎಸ್‌ ಜನತಾ ಜಲಧಾರೆ, ಜನತಾಮಿತ್ರ ಕಾರ್ಯಕ್ರಮ ಹಮ್ಮಿಕೊಂಡು ಸಂಘಟನೆಗೆ ಸಜ್ಜಾಗುತ್ತಿದೆ

ಒಟ್ಟಾರೆ ಅವಧಿಗೆ ಮೊದಲೇ ಚುನಾವಣೆ ಎದುರಿಸಲು ಮೂರೂ ಪಕ್ಷಗಳು ತಯಾರಿ ನಡೆಸಿರುವುದು ಗುಟ್ಟಾಗೇನೂ ಉಳಿದಿಲ್ಲ.