ಮಳೆಹಾನಿ ಸಂತ್ರಸ್ತರೊಂದಿಗೆ ಸರ್ಕಾರ ಇದೆ: ಸಮೀಕ್ಷೆ ನಂತರ ಪರಿಹಾರ -ಬೊಮ್ಮಾಯಿ

ಮೈಸೂರು: ನಮ್ಮ ಸರ್ಕಾರದ ಎಲ್ಲಾ ಸಚಿವರು ಹಾಗೂ ನಾನು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಡಿಕೇರಿ, ಮಂಗಳೂರು, ಉಡುಪಿ ಪ್ರವಾಸ ಕೈಗೊಂಡಿರುವ ಸಿಎಂ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಈ ಎಲ್ಲಾ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುತ್ತೇನೆ ಎಂದು ಹೇಳಿದರು.

ಸಂಕಷ್ಟದಲ್ಲಿರುವ ಜನರ ಜೊತೆ ನಾವು ನಿಲ್ಲುತ್ತೇವೆ ಎಂದು ಭರವಸೆ ನೀಡಿದರು

ಮಳೆ ಹಾನಿ ಕುರಿತು ಕೆಲವು ಮಾಹಿತಿಗಳಿವೆ. ಪ್ರಾಣಹಾನಿಯಾಗಿರುವಂಥದ್ದು, ಮನೆಗಳು ಬಿದ್ದಿರುವಂಥದ್ದು ಹಾಗೂ ಬೆಳೆ ಹಾನಿ ಬಗ್ಗೆ ಸರ್ವೇ ನಡೆದಿದೆ ಎಂದು ‌ಹೇಳಿದರು.

ಈ ಬಾರಿ ಮಳೆಯಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವು ಕಡೆ ಭೂಕುಸಿತವಾಗಿದೆ.ಕೊಡಗು ಬಳಿ ಭೂಕಂಪವಾಗಿದೆ. ಕಡಲ ತೀರದಲ್ಲಿ ಕಡಲಕೊರೆತವಾಗಿದೆ.

ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ತೊಂದರೆಯಾಗಿದೆ. ಜಲಾಶಯದಿಂದ ಹೆಚ್ಚು ನೀರು ಬಿಟ್ಟ ಸಂದರ್ಭದಲ್ಲಿ ಬೆಳೆ ಹಾನಿಯಾಗಿತ್ತು. ಅದೆಲ್ಲಾ ಕೂಡ ಸಮೀಕ್ಷೆ ಆಗಿದೆ ಎಂದು ಸಿಎಂ ತಿಳಿಸಿದರು.

ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ನಲ್ಲಿ 739ಕೋಟಿ ಹಣ ಇದೆ,ರೆಸ್ಕ್ಯೂ ಮತ್ತು ರಿಲೀಪ್ ಕಾರ್ಯಾಚರಣೆಗೆ ಯಾವುದೇ ರೀತಿ ಹಣದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ನದಿಪಾತ್ರದಲ್ಲಿರುವ ಮನೆಗಳನ್ನು ಶಿಫ್ಟ್ ಮಾಡಿ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ತಜ್ಞರ ಅಭಿಪ್ರಾಯ ಕೇಳಿದ್ದೇನೆ. ಆ ಪ್ರಕಾರ  ವಿಶೇಷ ಯೋಜನೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.

ನಿಗಮ ಮಂಡಳಿಗಳಲ್ಲಿ ಯಾರಿಗೆ ಒಂದೂವರೆ ವರ್ಷ ಮೇಲಾಗಿದೆ ಅವರನ್ನು ತೆಗೆದು ಹೊಸಬರಿಗೆ ಅವಕಾಶ ಕೊಡಬೇಕೆಂಬ ಬಗ್ಗೆ ಈ ಹಿಂದೆಯೇ ಕೋರ್ ಕಮಿಟಿಯಲ್ಲಿ ತೀರ್ಮಾನವಾಗಿದೆ.

ಅದರಂತೆ ಮುಂದಿನ ದಿನಗಳಲ್ಲಿ ಆ ಕೆಲಸ ಮಾಡುತ್ತೇವೆ. ಬೇರೆಯವರಿಗೂ ಅವಕಾಶ ಕೊಡಬೇಕಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಸಿಎಂ ಉತ್ತರಿಸಿದರು.

ಉಸ್ತುವಾರಿ ಸಚಿವರನ್ನು ತೊಡಗಿಸಿಕೊಳ್ಳುತ್ತಿಲ್ಲವೆಂಬ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರನ್ನು ಯಾರೂ ಇನ್ವಾಲ್ವ್ ಮಾಡುವ ಅವಶ್ಯಕತೆ ಇಲ್ಲ, ಅವರೇ ಎಲ್ಲರನ್ನೂ ಇನವಾಲ್ವ್ ಮಾಡಿಕೊಳ್ಳಬೇಕು ಎಂದು ಬೊಮ್ಮಾಯಿ ತಿಳಿಸಿದರು.

ಸಚಿವರುಗಳಾದ ವಿ.ಸುನೀಲ್ ಕುಮಾರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತಿತರರು ಈ ವೇಳೆ ಹಾಜರಿದ್ದರು.