ಶಿಂದೆ-ಉದ್ದವ್ ಠಾಕ್ರೆಗೆ ಚುನಾವಣಾ ಆಯೋಗ ನೋಟೀಸ್

ನವದೆಹಲಿ: ಬಹುಮತ ಸಾಬೀತಪಡಿಸಲು ಅಗತ್ಯವಿರುವ ದಾಖಲೆಗಳನ್ನು ಆ.8ರೊಳಗೆ ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಶಿವಸೇನೆ ನಾಯಕ ಉದ್ದವ್ ಠಾಕ್ರೆ ಅವರಿಗೆ ನೋಟಿಸ್ ನೀಡಿದೆ.

ಶಿವಸೇನೆ ಪಕ್ಷದ ನಾಯಕತ್ವವನ್ನು ಯಾರು ವಹಿಸಬೇಕು ಎಂಬ ಬಗ್ಗೆ ಉದ್ದವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳ ನಡುವೆ ನಡೆಯುತ್ತಿರುವ ಮೇಲಾಟದ ಬೆಳವಣಿಗೆ ಈಗ ಮತ್ತೊಂದು ಹಂತ ತಲುಪಿದಂತಾಗಿದೆ.

ಪೂರಕ ದಾಖಲೆಗಳನ್ನು ಸಲ್ಲಿಸಿದ ನಂತರ ಚುನಾವಣಾ ಆಯೋಗ ಈ ಎರಡೂ ಬಣಗಳ ವಾದವನ್ನು ಆಲಿಸಲಿದೆ.

ಶಿಂಧೆ ನೇತೃತ್ವದಲ್ಲಿ ಬಂಡಾಯವೆದಿದ್ದ 40 ಶಾಸಕರು ತಮ್ಮದು ಪ್ರತ್ಯೇಕ ಬಣ ಎಂದು ಘೋಷಿಸಿಕೊಂಡು ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗದ್ದಾರೆ.

ಚುನಾವಣಾ ಆಯೋಗಕ್ಕೆ ಈ ಸಂಬಂಧ ಪತ್ರವನ್ನು ಬರೆದಿದ್ದ ಶಿಂಧೆ ಬಣ 40 ಶಾಸಕರು ಹಾಗೂ 12 ಮಂದಿ ಲೋಕಸಭಾ ಸದಸ್ಯರ ಬೆಂಬಲ ತಮಗಿದೆ ಎಂದು ಘೋಷಿಸಿಕೊಂಡಿದೆ

ಈ ಎರಡೂ ಬಣಗಳು ನಮ್ಮದೇ ನಿಜವಾದ ಶಿವಸೇನೆ ಎಂದು ಪಕ್ಷದ ಚಿಹ್ನೆಯ ಹಕ್ಕಿಗೆ ಪ್ರತಿಪಾದನೆ ಮಂಡಿಸಿವೆ.

ತಮ್ಮ ಬಣದ ನಾಯಕನೇ ಪಕ್ಷದ ನಾಯಕ ಎಂದು ಪ್ರತಿಪಾದಿಸಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಎರಡೂ ಬಣಗಳಿಗೆ ಸೇರಿದವರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಬೇಕಾಗಿದೆ.

ಇಂಥ ಪ್ರಕರಣಗಳಲ್ಲಿ ಈ ಹಿಂದೆ ನಡೆಸಿದ್ದ ಪ್ರಕ್ರಿಯೆಗಳನ್ನು ಗಮನಿಸಿ ಚುನಾವಣಾ ಆಯೋಗ ಎರಡು ಬಣಗಳಿಗೆ ಲಿಖಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.