ಬೆಂಗಳೂರು: ಮುಖ್ಯಮಂತ್ರಿ ಮಂಗಳೂರಿನಲ್ಲಿದ್ದಾಗಲೇ ಇನ್ನೊಂದು ಕೊಲೆಯಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲಕಚ್ಚಿದೆ ಎಂಬುದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆ, ಸೃಜನಶೀಲತೆ, ಉದ್ಯಮಶೀಲತೆಯ ತವರು ಕರಾವಳಿ ಈಗ ಸರಣಿ ಕೊಲೆಗಳ ಆಡಂಬೋಲವಾಗಿದೆ.
10 ದಿನಗಳಲ್ಲಿ 3 ಕೊಲೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೊಮ್ಮಾಯಿ ಅವರು ಮಂಗಳೂರಿನಲ್ಲಿ ದ್ದಾಗಲೇ ಕೊಲೆ ಆಗಿದೆ. ಅಷ್ಟರಲ್ಲಿ ಅವರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಕೊಲೆಗೆಡುಕರನ್ನು ಹಡೆಮುರಿ ಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನು ತೋರಲಿಲ್ಲ ಎಂದು ವ್ಯಂಗ್ಯ ವಾಡಿದ್ದಾರೆ.
ಅವರ ಅಧೈರ್ಯಕ್ಕೆ ಕಾರಣವೇನು ಕಾಣದ ಕೈಗಳ ಒತ್ತಡವೇನಾದರೂ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಕೊಲೆಗಳನ್ನು ಹತ್ತಿಕ್ಕುವ ಬದಲು ಬೊಮ್ಮಾಯಿ ಅವರು ಬುಲ್ಡೋಜರ್ ಬಗ್ಗೆ ಮಾತನಾಡುತ್ತಿದ್ದಾರೆ. ಕರಾವಳಿ ಮತ್ತು ಕರ್ನಾಟಕವನ್ನು ಜಂಗಲ್ ರಾಜ್ ಮಾಡುವ ಹುನ್ನಾರವಷ್ಟೇ ಇದು ಎಂದು ಕಿಡಿಕಾರಿದ್ದಾರೆ.
ಮನೆ, ಮನಗಳಲ್ಲಿ ಮಾತ್ರ ಇರಬೇಕಿದ್ದ ಧರ್ಮವನ್ನು ವ್ಯಸನವನ್ನಾಗಿಸಿ ಕೈಗೆ ದೊಣ್ಣೆ, ಶೂಲ ಕೊಟ್ಟು ಯುವಕರ ನಿಷ್ಕಲ್ಮಶ ಮುಗ್ಧಮನಸ್ಸಿಗೆ ಕೊಮುಪ್ರಾಷನ ಮಾಡಿದ ದುಷ್ಪರಿಣಾಮ ಈ ಸರಣಿ ಕೊಲೆಗಳು.
ಧರ್ಮನಿರಪೇಕ್ಷತೆ ತತ್ತ್ವವನ್ನು ನಿರ್ನಾಮ ಮಾಡಿದ್ದೇ ಇದಕ್ಕೆಲ್ಲ ಮೂಲ ಕಾರಣ.
ಮಸೂದ್, ಪ್ರವೀಣ್ ನೆಟ್ಟಾರು, ಈಗ ಫಾಸಿಲ್. ಇನ್ನೆಷ್ಟು ಕೊಲೆಗಳು ನಡೆದರೆ ಸರಕಾರಕ್ಕೆ ತೃಪ್ತಿ ಎಂದು ಕಿಡಿಕಾರಿದ್ದಾರೆ.
ಸರಣಿ ಕೊಲೆಗಳಿಂದ ಕರಾವಳಿಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ಈ ಅರಾಜಕತೆಯಿಂದ ಇಡೀ ಕರಾವಳಿಯ ಆರ್ಥಿಕತೆಯೇ ಬುಡಮೇಲಾಗುತ್ತಿದೆ. ಆದರೆ, ಬಿಜೆಪಿ ಸರಕಾರ ಸಾವಿನಲ್ಲೂ ಕೊಲೆಗೆಡುಕ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕೊಲೆಗಳ ಹಿಂದಿನ ಕಾರಣ ಬೇಧಿಸಿ ಕೊಲೆಗೆಡುಕರನ್ನು ಹತ್ತಿಕ್ಕುವ ಕೆಲಸ ಮಾಡಬೇಕಿತ್ತು.
ಆದರೆ ಸರ್ಕಾರ ಪ್ರತೀ ಕೊಲೆಗೂ ತಾನೇ ಮುಂದೆ ನಿಂತು ಹೊಸ,ಹೊಸ ಟ್ವಿಸ್ಟ್ ನೀಡುತ್ತಿದೆ.
ಸರಕಾರದ ಕೆಲಸ ಬಿಗಿ ಆಡಳಿತ ನಡೆಸುವುದೇ ಹೊರತು ಬೀದಿಯಲ್ಲಿ ನಿಂತು ಗಂಟಲು ಹರಿದುಕೊಳ್ಳುವುದಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

