ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿಧ್ವಂಸಕ ಕೃತ್ಯ ಸಾಧ್ಯತೆ: ರಾಜ್ಯದಲ್ಲಿ ಹೈ ಅಲರ್ಟ್

ಬೆಂಗಳೂರು: ಸಮಾಜಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದ್ದು, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.

ಆ.15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಮಂಗಳೂರು, ಉಡುಪಿ, ಕಾರವಾರ(ಭಟ್ಕಳ), ಮಡಿಕೇರಿ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಮೈಸೂರು ಮತ್ತಿತರೆಡೆ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಬೇಕೆಂದು ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೇಂದ್ರ ಗುಪ್ತಚರ ವಿಭಾಗವು ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದು, ಕೆಲವು ಸಮಾಜಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿದ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿ ಕುಳಿತಿವೆ ಎಂದು ತಿಳಿಸಲಾಗಿದೆ.

ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಬೇಕು. ಗುಪ್ತಚರ ವಿಭಾಗ, ಆಂತರಿಕ ಭದ್ರತೆಯನ್ನು ಇನ್ನಷ್ಟು ಚುರುಕುಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಗೃಹ ಇಲಾಖೆಸೂಚಿಸಿದೆ ಎಂದು ತಿಳಿದುಬಂದಿದೆ.

ಬೇರೆ ರಾಷ್ಟ್ರಗಳಿಂದ ಆಗಮಿಸುವ ಪ್ರಜೆಗಳ ಮೇಲೆ ಕಣ್ಣಿಡಬೇಕು. ವಿಮಾನ ನಿಲ್ದಾಣದಲ್ಲಿ ಬರುವ ಪ್ರತಿಯೊಬ್ಬ ಪ್ರಯಾಣಿಕರ ಮಾಹಿತಿಯನ್ನು ಕಲೆ ಹಾಕಬೇಕು ಎಂದು ಸೂಚಿಸಿದೆ.

ಕರ್ನಾಟಕದ ಪ್ರಮುಖ ಸ್ಥಳಗಳಾದ ವಿಧಾನಸೌಧ, ಹೈಕೋರ್ಟ್, ವಿಕಾಸಸೌಧ, ಉದ್ಯೋಗ ಸೌಧ, ಮುಖ್ಯಮಂತ್ರಿಗಳ ನಿವಾಸ, ರಾಜಭವನ, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಟ್ರೋರೈಲ್ವೆ ನಿಲ್ದಾಣ.

ಐಟಿಬಿಟಿ ಕಂಪನಿಗಳು, ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಕೆಆರ್‍ಎಸ್, ತುಂಗಭದ್ರ, ಭದ್ರಾ, ಹಾರಂಗಿ, ಕಬಿನಿ ಸೇರಿದಂತೆ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳಲ್ಲೂ ಭದ್ರತೆ ಹೆಚ್ಚಿಸಬೇಕೆಂದು ಗೃಹ ಇಲಾಖೆ ಸೂಚನೆ ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹಿರಿಯ ಪೆಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಭದ್ರತೆ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.