ನವೆಂಬರ್ 1ರಂದು ಅಪ್ಪೂಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು: ಖ್ಯಾತ ನಟ ದಿವಂಗತ ಡಾ: ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ  ಸಂಘದ  ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ   ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ನಂತರ  ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರಶಸ್ತಿ ಕೊಡಮಾಡಲು ಸಿದ್ಧತೆ ಕೈಗೊಳ್ಳಲು  ಸಮಿತಿಯನ್ನು ರಚಿಸಲಾಗುವುದು.  ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರು ಸಹ ಸಮಿತಿಯಲ್ಲಿ ಇರುತ್ತಾರೆ ಎಂದು ತಿಳಿಸಿದರು.

ಎಲ್ಲರೂ ಸೇರಿ ಗೌರವಯುತವಾಗಿ ಪುನೀತ್ ಅವರಿಗೆ ಮರಣೋತ್ತರವಾಗಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

1922 ರಿಂದ ಫಲಪುಷ್ಪ ಪ್ರದರ್ಶನ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಈ ಬಾರಿ ಸ್ವಾತಂತ್ರ್ಯೋತ್ಸವದ  ಅಮೃತ ವರ್ಷಾಚರಣೆಯ ಅಂಗವಾಗಿ ಸಂಭ್ರಮ ತುಂಬಿದೆ ಎಂದು ಇದೇ ವೇಳೆ ಸಿಎಂ ತಿಳಿಸಿದರು.

ಈ ಬಾರಿ ಡಾ: ರಾಜ್ ಕುಮಾರ್ ಹಾಗೂ ಪುನೀತ್  ರಾಜ್ ಕುಮಾರ್ ಅವರ ಸ್ಮರಣಾರ್ಥ ವಿಶೇಷವಾದ ಪ್ರದರ್ಶನ ಏರ್ಪಟ್ಟಿದೆ. ಹಾಗಾಗಿ ಸಾಕಷ್ಟು ಜನರನ್ನು ಪ್ರದರ್ಶನ ಆಕರ್ಷಿಸಲಿದೆ ಎಂದು ತಿಳಿಸಿದರು.

ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಅವರ ನೇತೃತ್ವದಲ್ಲಿ ಅಧಿಕಾರಿಗಳು ಉತ್ತಮವಾಗಿ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ಆನಂದಿಸಬೇಕೆಂದು ಬೊಮ್ಮಾಯಿ ಮನವಿ ಮಾಡಿದರು.