ರಾಜ್ಯದಲ್ಲಿ ಮಂಕಿಫಾಕ್ಸ್ ಕಂಡುಬಂದಿಲ್ಲ; ಆದರೂ ಮುನ್ನೆಚ್ಚರಿಕೆ -ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಮಂಕಿ ಫಾಕ್ಸ್‌ ಪ್ರಕರಣ ಕಂಡುಬಂದಿಲ್ಲ,ಆದರೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ವಿಶ್ವ ವ್ಯಾಸ್ಕ್ಯುಲರ್‌ ದಿನದ ಪ್ರಯುಕ್ತ, ವ್ಯಾಸ್ಕ್ಯುಲರ್‌ ಸರ್ಜನ್ಸ್‌ ಅಸೋಸಿಯೇಶನ್‌ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ   ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಸುಧಾಕರ್ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಮಂಕಿ ಫಾಕ್ಸ್‌ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇಥಿಯೋಪಿಯಾದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಕಿ ಫಾಕ್ಸ್‌ ಇರುವ ಅನುಮಾನದ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದು ಮಂಕಿ ಫಾಕ್ಸ್‌ ಅಲ್ಲ, ಸ್ಮಾಲ್‌ ಫಾಕ್ಸ್‌ ಎಂದು ದೃಢಪಟ್ಟಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು 24 ಗಂಟೆ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸುಧಾಕರ್ ಹೇಳಿದರು.

ಸ್ಕಿನ್‌ ರಶಸ್‌ ಸೇರಿದಂತೆ ಹಲವಾರು ಲಕ್ಷಣಗಳಿಂದ ಮಂಕಿ ಫಾಕ್ಸ್‌ ಗೊತ್ತಾಗುತ್ತದೆ. ಆದರೂ ಕೋವಿಡ್‌ನಂತೆಯೇ ಇದು ಕೂಡ ಮೂರು ನಾಲ್ಕು ದಿನಗಳಾದ ನಂತರ ಪತ್ತೆಯಾಗುತ್ತದೆ. ಇದು ಒಂದು ಚಿಂತಿಸುವ ವಿಷಯ ಎಂದು ತಿಳಿಸಿದರು.

ದೇಶದಲ್ಲಿ ವ್ಯಾಸ್ಕ್ಯುಲರ್‌ ತಜ್ಞರು ಬಹಳ ಕಡಿಮೆ ಇದ್ದಾರೆ. ಈ ಆರೋಗ್ಯದ ಸಮಸ್ಯೆ ಬಗ್ಗೆ ನಗರ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದು ಇದೇ ವೇಳೆ ಸಚಿವರು ಹೇಳಿದರು.

ಟ್ರಾಫಿಕ್‌ ಪೊಲೀಸರು ಸಾಮಾನ್ಯ ಜನರಿಗಿಂತ ಹೆಚ್ಚು ಕಾಲ ನಿಂತುಕೊಳ್ಳುತ್ತಾರೆ. ಹಾಗೆಯೇ ಶಿಕ್ಷಕರು, ಸರ್ಜನ್‌ಗಳು ಮತ್ತಿತರರು ಕೂಡ ಹೆಚ್ಚು ಸಮಯ ನಿಂತುಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ವ್ಯಾಸ್ಕ್ಯುಲರ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ರಕ್ತನಾಳದ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಲಘು ವ್ಯಾಯಾಮವನ್ನು ಮಾಡುವಂತೆ ಎಲ್ಲರಿಗೂ ಉತ್ತೇಜಿಸಬೇಕು. ವಿಶೇಷವಾಗಿ ಮಧುಮೇಹಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸುಧಾಕರ್ ಮನವಿ ಮಾಡಿದರು.