ಮೈಸೂರು: ನಾನು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಹಾಗಾಗಿ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ.ಹಾಗಂತ ಎಲ್ಲೆಡೆ ಸ್ಪರ್ಧೆ ಮಾಡಲಾಗುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸೋಮವಾರ ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ನೀವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂದು ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದರು.
ವಿಧಾನಸಭೆ ಚುನಾವಣೆ ಹತ್ತಿರ ಬಂದಾಗ ನಿಮಗೆ ನಾನು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಹೇಳುತ್ತೇನೆ. ಈಗ ಯಾವುದೇ ನಿರ್ಧಾರ ಮಾಡಿಲ್ಲ ಎಂದರು.
ವರುಣದಲ್ಲಿ ಕಾರ್ಯಕ್ರಮ ಮಾಡಿದ ಕೂಡಲೇ ನಾನು ವರುಣದಲ್ಲಿ ಸ್ಪರ್ಧಿಸುತ್ತೇನೆ ಎಂದು ಏಕೆ ಅಂದುಕೊಳ್ತೀರಾ, ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಹಾಗಂತ ಅಲ್ಲಿಂದ ಸ್ಪರ್ಧಿಸುತ್ತೇನಾ ಎಂದು ಮರು ಪ್ರಶ್ನೆ ಮಾಡಿದರು.
ಹರ್ ಘರ್ ತಿರಂಗಾ ಯಾತ್ರೆ ಮೂಲಕ ಬಿಜೆಪಿಯವರು ನಾಟಕವಾಡುತ್ತಿದ್ದಾರೆ. ಬಿಜೆಪಿಯ ಯಾರೊಬ್ಬರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಲ್ಲ ಎಂದು ಬಿಜೆಪಿ ವಿರುದ್ಧ ಇದೇ ವೇಳೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾವೊಬ್ಬ ನಾಯಕರು ತ್ಯಾಗ ಮಾಡಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾಗಿರುವುದರಿಂದ ಬಿಜೆಪಿಯವರು ಹರ್ ಘರ್ ತಿರಂಗಾ ಯಾತ್ರೆ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು ಎಂದೂ ಕೂಡ ರಾಷ್ಟ್ರ ಧ್ವಜಕ್ಕೆ ಗೌರವ ಕೊಟ್ಟವರಲ್ಲ. ರಾಷ್ಟ್ರಗೀತೆ, ಬಾವುಟವನ್ನು ಅವರು ವಿರೋಧಿಸಿದ್ದರು.
ಸಾವರ್ಕರ್, ಗೋಲ್ವಾಲ್ಕರ್ ಅವರಿಗೆಲ್ಲಾ ರಾಷ್ಟ್ರಧ್ವಜದ ಬಗ್ಗೆ ಗೌರವವಿರಲಿಲ್ಲ. ಆದರೆ ಈಗ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಹರ್ ಘರ್ ತಿರಂಗಾ ಯಾತ್ರೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮೋತ್ಸವ ಬಗ್ಗೆ ಬಿಜೆಪಿ ನಾಯಕರಿಂದ ಟೀಕೆ ಮುಂದುವರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರಿಗೆ ಆ ಕಾರ್ಯಕ್ರಮದಿಂದ ಭಯ ಬಂದಿದೆ. ಈ ಭಯದಲ್ಲಿಯೇ ಅವರು ಇನ್ನೂ ವ್ಯರ್ಥ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಸಿದ್ದು ಹೇಳಿದರು.
ಅಹಿಂದ ಮತಗಳನ್ನು ಮತ ಪಟ್ಟಿಯಿಂದ ತೆಗೆಸಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ನಮ್ಮ ಅಧ್ಯಕ್ಷರು ಹೇಳಿದ ಮೇಲೆ ಆ ಮಾತಿನಲ್ಲಿ ಸತ್ಯವಿರುತ್ತದೆ.
ಅಲ್ಪ ಸಂಖ್ಯಾತರು, ಹಿಂದುಳಿದವರು, ದಲಿತರ ಮತಗಳು ಕಾಂಗ್ರೆಸ್ ಪರವಾಗಿ ಇರುತ್ತವೆ. ಈ ಕಾರಣ ಆ ಮತಗಳನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಕೆಲಸ ನಡೆದಿರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.

