ಶಿಕ್ಷಕರ ನೇಮಕಾತಿಗೆ ವಯೋಮಾನ ತಿದ್ದುಪಡಿಗೆ ತೀರ್ಮಾನ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ನಿಗದಿಯಾಗಿದ್ದ ವಯೋಮಾನವನ್ನು ತಿದ್ದುಪಡಿ ಮಾಡುವ ಮಹತ್ವದ ತೀರ್ಮಾನವನ್ನು ಸಂಪುಟ ಸಭೆ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸಡಿಲಿಕೆ ಮಾಡಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಅರ್ಹತಾ ಪರೀಕ್ಷೆಗೆ ನಿಗದಿಯಾಗಿದ್ದ ಶೇ.60ರಷ್ಟು ಅಂಕಗಳನ್ನು ಸಡಿಲಿಕೆ ಮಾಡಿ ಶೇ.50 ಅಂಕಕ್ಕೆ ನಿಗದಿಪಡಿಸಲಾಗಿದೆ.

ಇನ್ನು ರಾಜ್ಯದಲ್ಲಿ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು 22.4ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಸಚಿವ ಸಂಪುಟ ತೀರ್ಮಾನಿಸಿದೆ.

ಕರ್ನಾಟಕ ರಾಜ್ಯ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳು 2020-22ಕ್ಕೂ ತಿದ್ದುಪಡಿ ಮಾಡಲಾಗಿದೆ.

ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸಿನಂತೆ ಪ್ರಾದೇಶಿಕ ಅಸಮತೋಲನ ನಿವಾರಿಸಲು ಹೊಸ ಅಭಿವೃದ್ಧಿ ಆಕಾಂಕ್ಷಿತ ತಾಲ್ಲೂಕುಗಳ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

102 ಅತಿ ಹಿಂದುಳಿದ ತಾಲ್ಲೂಕು 92 ಶೈಕ್ಷಣಿಕ ತಾಲ್ಲೂಕು ಸೇರಿದಂತೆ 50 ಹೊಸ ತಾಲ್ಲೂಕುಗಳು ಒಳಗೊಂಡಂತೆ ಮತ್ತಿತರ ಕಡೆ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನಿಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಸ್‍ಸಿ-ಎಸ್‍ಟಿ, ಹಿಂದುಳಿದವರಿಗೆ ಮೀಸಲಾತಿ ನೀಡುವ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ ನೀಡಿದ್ದ ವರದಿಗೆ ಸಂಪುಟ ಅನುಮೋದಿಸಿದೆ ಎಂದು ಮಾದುಸ್ವಾಮಿ ತಿಳಿಸಿದರು.