ಬೆಂಗಳೂರು: ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಪ್ರೆಸ್ ಕ್ಲಬ್ ಬೆಂಗಳೂರು ಆಯೋಜಿಸಿದ್ದ ಬ್ಯುಸಿನೆಸ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪತ್ರಕರ್ತರ ಹಲವಾರು ಬೇಡಿಕೆಗಳಿವೆ. ಪತ್ರಕರರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಭದ್ರತೆಯ ಅವಶ್ಯಕತೆ ಇದೆ.
ನಿವೃತ್ತ ಪತ್ರಕರ್ತರಿಗೆ ಮಾಸಾಶನ ನೀಡುವ ಸಂಬಂಧ ಸಮಿತಿ ರಚಿಸಲು ಕೂಡಲೇ ಆದೇಶ ಹೊರಡಿಸಲಾಗುವದು.ಅದಕ್ಕಿರುವ ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ವಿಧಾನಸಭೆಯ ಹತ್ತಿರವೇ ಪ್ರೆಸ್ ಕ್ಲಬ್ ಇದೆ. ಪತ್ರಕರ್ತರು ಶಕ್ತಿಸ್ಥಳದ ಭಾಗ. ನಾಡು ಕಟ್ಟಲು ನಿಮ್ಮ ಶಕ್ತಿ ಬಳಕೆಯಾಗಲಿ ಎಂದು ಹೇಳಿದರು.
ಹೊಗಳಿಕೆ, ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞೆ ಇದ್ದಾಗ ರಾಜಕಾರಣಿ ಯಶಸ್ವಿಯಾಗಲು ಸಾಧ್ಯ.
ಇವೆರಡರ ಮಧ್ಯೆ ಇರುವ ಸತ್ಯವನ್ನು ಕಂಡುಕೊಂಡು ಮುಂದೆ ಸಾಗಬೇಕು. ಇಂಥ ಕಾರ್ಯಕ್ರಮಗಳನ್ನು ಪ್ರೆಸ್ ಕ್ಲಬ್ ಹೆಚ್ಚಾಗಿ ಮಾಡಬೇಕು ಎಂದು ಸಲಹೆ ನೀಡಿದರು ಸಿಎಂ
ಪ್ರೆಸ್ ಕ್ಲಬ್ ಸಾಮಾನ್ಯವಾಗಿ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುತ್ತಾರೆ. ಬ್ಯುಸಿನೆಸ್ ಐಕಾನ್ ಅವಾರ್ಡ್ ಕೊಡುತ್ತಾರೆ ಎಂದಾಗ ಆಶ್ಚರ್ಯವಾಯಿತು.
ಪ್ರೆಸ್ ಕ್ಲಬ್ ತನ್ನ ಸಾಮಾಜಿಕ ಹೊಣೆಗಾರಿಕೆ ಯನ್ನು ಹೆಚ್ಚಿಸಿಕೊಂಡಿದೆ. ಬ್ಯುಸಿನೆಸ್ ನಲ್ಲಿ ವಿಶೇಷ ಸಾಧನೆ ಮಾಡಿರುವವರನ್ನು ಗುರುತಿಸಿ ಅವಾರ್ಡ್ ಕೊಡುವುದು ವಿಶೇಷ ಎಂದು ಹೇಳಿದರು.
ಇದೇ ವೇಳೆ ಪ್ರಶಸ್ತಿ ಪಡೆದವರಿಗೆ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು.
ಇದು ವಿಶೇಷ ಪ್ರಶಸ್ತಿ. ಟೀಕಾಕಾರರಿಂದ ಪ್ರಶಸ್ತಿ ಪಡೆಯುವುದು ಸುಲಭವಲ್ಲ. ಅವರಿಂದ ಪ್ರಶಸ್ತಿ ಪಡೆದಿರುವುದು ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೀರಿ ಎಂದು ನಿರೂಪಿಸುತ್ತದೆ ಎಂದು ಹೇಳಿದರು.
ರಾಜಕಾರಣಿಗಳಿಗೂ ಮಾಧ್ಯಮದವರಿಗೂ ಅವಿನಾಭಾವ ಸಂಬಂಧ. ಅವರನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ಅವರು ಇರಲಾಗುವುದಿಲ್ಲ.
ನಾವು ಮಾಡಿರುವ ಕೆಲಸಗಳು ಜನರಿಗೆ ತಿಳಿಯಲು ನಿಮ್ಮ ಅಗತ್ಯವಿದೆ. ಮಾಧ್ಯಮಗಳಿಲ್ಲದೆ ಜನರಿಗೆ ನಾವು ತಲುಪಲು ಸಾಧ್ಯವಿಲ್ಲ.
ಹೀಗಾಗಿ ನಮ್ಮ ನಿಮ್ಮಲ್ಲಿ ಅನ್ಯೋನ್ಯ ಸಂಬಂಧ ಅವಶ್ಯಕ ಮತ್ತು ಅನಿವಾರ್ಯ ಎಂದರು.
ಹಾಗಂತ ಅದು ಒಂದೇ ಮಾರ್ಗದ ಟ್ರಾಫಿಕ್ ಅಲ್ಲ. ನಮ್ಮನ್ನು ಬಿಟ್ಟರೆ ನಿಮಗೆ ಸುದ್ದಿಗಳಿಲ್ಲ. ನೀವು ಕ್ರೀಡೆ, ಸಿನಿಮಾ ಎಂದು ಸುದ್ದಿ ಹಾಕಿದರೂ ಮೊದಲ ಪುಟದಲ್ಲಿ ನಾವೇ ಬೇಕು.
ರಾಜಕಾರಣವೇ ಇಲ್ಲದ ದಿನವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ.ವಾಹಿನಿಗಳ ಟಿ.ಆರ್.ಪಿಗಳು ಹಾಗೂ ರಾಜಕಾರಣಿಗಳ ಮಹತ್ವ ಕಡಿಮೆಯಾಗುತ್ತದೆ ಎಂದರು. ನಾವು ಹೇಳಿ ಮಾಡಿಸಿದ ಜೋಡಿ. ಒಟ್ಟಿಗೇ ಬಾಳಬೇಕೆಂದು ಬೊಮ್ಮಾಯಿ ತಿಳಿಸಿದರು.
ಪತ್ರಕರ್ತರು ಬಹಳಷ್ಟು ಅಪಾಯಗಳನ್ನು ಎದುರಿಸುತ್ತಾರೆ. ಇದೊಂದು ಸಾಹಸ. ಸಾಧಿಸುವ ಹಂಬಲವಿರುತ್ತದೆ. ದೇಶಕ್ಕಾಗಿ ಸೇವೆ ಮಾಡಿರುತ್ತೀರಿ. ಪತ್ರಕರ್ತರ ವೃತ್ತಿಗೆ ನಾವು ಗೌರವ ಕೊಡುತ್ತೇವೆ ಎಂದು ಸಿಎಂ ತಿಳಿಸಿದರು.

