ಬೆಂಗಳೂರು: ಕೆಎಸ್ ಆರ್ ಟಿಸಿ ಚಾಲಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವುದಕ್ಕೆ ಸಚಿವ ಚೆಲುವರಾಯಸ್ವಾಮಿ ಕಾರಣ ಎಂಬ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಉಪಪ್ರಧಾನಮಂತ್ರಿ ಡಾ. ಬಾಬು ಜಗಜೀವನ್ ರಾಂ ಅವರ 37 ನೇ ಪುಣ್ಯಸ್ಮರಣೆಯ ಅಂಗವಾಗಿ ವಿಧಾನ ಸೌಧದ ಆವರಣದಲ್ಲಿರುವ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಮಾತನಾಡಿದರು.
ಚಾಲಕರು ನೋಟ್ ಬರೆದಿದ್ದು,ಅದರಲ್ಲಿ ಸಚಿವ ಚೆಲುವರಾಯಸ್ವಾಮಿಯವರ ಹೆಸರು ಇದೆ.ಹಾಗಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವರು ರಾಜೀನಾಮೆ ಕೊಡಬೇಕು ಎಂದಿದ್ದಾರಲ್ಲಾ ಎಂದು ಮಾಧ್ಯಮದವರು ಪ್ರಶ್ನಿಸಿದರು.
ಅದಕ್ಕೆ ಈ ಬಗ್ಗೆ ವಿಚಾರ ಮಾಡುತ್ತೇನೆ. ಅವರ ಪತ್ನಿ ಪಂಚಾಯತಿ ಸದಸ್ಯರು, ಅಧ್ಯಕ್ಷರಾಗುವ ಪ್ರಯತ್ನ ಮಾಡುತ್ತಿದ್ದಾರೆ. ಇಲಾಖೆ ವರ್ಗಾವಣೆ ಮಾಡಿದೆ,ವರ್ಗಾವಣೆ ಮಾಡಿದ ಕಾರಣಕ್ಕೆ ವಿಷ ಕುಡಿದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ವರ್ಗಾವಣೆಗಳ ಬಗ್ಗೆ ಹತಾಶರಾಗಿದ್ದಾರೆ. ಸರ್ಕಾರ ವರ್ಗಾವಣೆ ಮಾಡಲೇಬೇಕು, ಮಾಡುತ್ತಿದೆ. ಅದಕ್ಕೆ ದಂಧೆ ನಡೆದಿದೆ, ಲಂಚ ಪಡೆದಿದ್ದಾರೆ ಎನ್ನುವುದು ಸರಿಯಲ್ಲ ಎಂದು ಹೇಳಿದರು.
ಅವರ ಕಾಲದಲ್ಲಿಯೂ ವರ್ಗಾವಣೆ ಆಗಿದ್ದವು. ಅವರು ದುಡ್ಡು ಪಡೆದಿದ್ದರೆ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಊಹೆ ಮೇಲೆ ಹೇಳಲಾಗುವುದಿಲ್ಲ.
ಹೊಸ ಸರ್ಕಾರ ಬಂದಿದೆ. ವರ್ಗಾವಣೆಯನ್ನು ಆಡಳಿದ ಹಿತದೃಷ್ಟಿಯಿಂದ ಮಾಡಬೇಕು. ಮಾರ್ಚ್ , ಏಪ್ರಿಲ್ ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ವರ್ಗಾವಣೆ ಆಗಿರಲಿಲ್ಲ. ಈಗ ಸಾಮಾನ್ಯ ವರ್ಗಾವಣೆಗಳಾಗುತ್ತಿವೆ ಅಷ್ಟೆ ಎಂದರು
ಹೆಚ್.ಡಿ.ಕುಮಾರಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರ ಆರೋಪಗಳು ಹಿಟ್ ಅಂಡ್ ರನ್ ಇದ್ದಂತೆ ಎಂದು ಉತ್ತರಿಸಿದರು.
ಅವರು ಮಾಡಿರುವ ಯಾವ ಆರೋಪಗಳನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಯತೀಂದ್ರ ಅವರ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ಅವರ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಅವರ ಅಣ್ಣ ಸಚಿವರಾಗಿದ್ದವರು, ಅವರ ಪತ್ನಿ ಶಾಸಕರಾಗಿದ್ದರು,ಅವರ ತಂದೆ ಪ್ರಧಾನಿಗಳಾಗಿದ್ದವರು, ಅವರ ಅಣ್ಣನ ಮಕ್ಕಳು ಶಾಸಕರಾಗಿದ್ದಾರಲ್ಲ, ಅವರನ್ನು ಏನಂತ ಕರೆಯಬೇಕು ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು.

