ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ:ಸಿಎಂ

ಬೆಂಗಳೂರು: ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಉದ್ಘಾಟಿಸಿ ಸಿಎಂ ಮಾತನಾಡಿದರು.

ಸಮ್ಮೇಳನದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ವ್ಯಕ್ತವಾಗಲಿ ಎಂದು ಆಶಿಸಿದರು.

ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.12 ರಿಂದ 15 ರಷ್ಟಿದ್ದ ಶಿಕ್ಷಣದ ಪ್ರಮಾಣ ಪ್ರಸ್ತುತ 74ರಷ್ಟಿದೆ. ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದಾಗ ಗುಣಮಟ್ಟದ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ, ಒದಗಿಸುವ ಶಿಕ್ಷಣ ದೊರಕುತ್ತಿದೆಯೇ ಎಂದು ಯೋಚಿಸಬೇಕು ಎಂದು ಹೇಳಿದರು.

ಇದು ಶಿಕ್ಷಕರ ತಪ್ಪಲ್ಲ, ವ್ಯವಸ್ಥೆಯ ಪರಿಣಾಮವಾಗಿ ಜಾತಿ ವ್ಯವಸ್ಥೆ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವುದರಿಂದ ಶಿಕ್ಷಣದಲ್ಲಿ ನಿರೀಕ್ಷಿಸಿದಷ್ಟು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಎಂದು ಸಿಎಂ ತಿಳಿಸಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಮೌಢ್ಯ, ಕಂದಾಚಾರಗಳಿಂದ ಸಮಾಜ ಕೂಡಿದ್ದು, ಇವುಗಳನ್ನು ದೂರ ಮಾಡುವ ಶಿಕ್ಷಣ ಪಡೆಯುವುದು ಅತ್ಯಂತ ಅಗತ್ಯ ಎಂದು ಹೇಳಿದರು.

ಅಸಮಾನತೆಯಿಂದ ಕೂಡಿರುವ ಸಮಾಜದಲ್ಲಿ ಮುಖ್ಯವಾಹಿನಿಗೆ ಎಲ್ಲರೂ ಬರಬೇಕೆಂದರೆ ಸಮಾಜದಲ್ಲಿ ಬದಲಾವಣೆಯಾಗಬೇಕು ಎಂದು ‌ಮುಖ್ಯ ಮಂತ್ರಿಗಳು ಕರೆ ನೀಡಿದರು.

ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದೊರೆಯಬೇಕು. ವೈಚಾರಿಕತೆ ಮತ್ತು ವೈಜ್ಞಾನಿಕ ಶಿಕ್ಷಣ ಶಿಕ್ಷಕರಿಂದ ಮಾತ್ರ ನೀಡಲು ಸಾಧ್ಯ. ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.

ಶಿಕ್ಷಕರ ಹಲವಾರು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಆರು ಮತ್ತು 7 ನೇ ವೇತನ ಆಯೋಗವನ್ನು ಜಾರಿ ಮಾಡಿದ್ದು, ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಒಪಿಎಸ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ, ವೇತನ ಬಡ್ತಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಸಿಎಂ ಆಶ್ವಾಸನೆ ನೀಡಿದರು.

ಶಿಕ್ಷಕರ ನಡವಳಿಕೆ ಉತ್ತಮವಾಗಿರಬೇಕು, ಎಲ್ಲಾ ಮಕ್ಕಳಿಗೂ ವೈಚಾರಿಕತೆ, ವೈಜ್ಞಾನಿಕತೆಯುಳ್ಳ ಶಿಕ್ಷಣ ನೀಡಿದರೆ ಸುಭದ್ರ, ಸುಂದರ ಸಮಾಜ, ದೇಶವನ್ನು ಕಟ್ಟಬಹುದು, ಭವಿಷ್ಯ ರೂಪಿಸುವಂತಹ ಮಕ್ಕಳನ್ನು ರೂಪಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿ ಗೌಡ, ಪ್ರೊ.ಬರಗೂರು ರಾಮಚಂದ್ರಪ್ಪ, ಬಸವರಾಜ ಗುಳಿಕಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಮತ್ತಿತರರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.