ಬೆಂಗಳೂರು: ರೇಷ್ಮೆ ಸಚಿವರಾದ ವೆಂಕಟೇಶ್ ಅವರು ಸದನದಲ್ಲಿ ಟಿ. ನರಸಿಪುರದಲ್ಲಿರುವ ಕೆಎಸ್ಐಸಿ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಾಣದ ಪ್ರಸ್ತಾವನೆ ಕೈಬಿಡಲಾಗಿದೆ ಎಂದು ಘೋಷಿಸಿದ್ದರು,ಆದರೆ ಭೂಮಿಯ ದಾಖಲೆ ಇನ್ನೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲೇ ಉಳಿದಿದ್ದು, ಗೊಂದಲಗಳಿಗೆ ಎಡೆಮಾಡಿದೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ಗಮನ ಸೆಳೆದಿದ್ದಾರೆ
ಕರ್ನಾಟಕದ ಹೆಮ್ಮೆಯ ಪ್ರತೀಕವಾದ ಮೈಸೂರು ಸಿಲ್ಕ್ ಗೆ ಸಂಬಂಧಿಸಿದ ಸಂಸ್ಥೆಯ ವಿಷಯದಲ್ಲಿ ಇಂತಹ ವಿಳಂಬ ಮತ್ತು ಅನಿಶ್ಚಿತತೆ ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅವರು ಟ್ವೀಟ್ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ.
ಮುಖ್ಯಮಂತ್ರಿ ಸುದ್ದರಾಮಯ್ಯ ಅವರು ತಕ್ಷಣ ಮಧ್ಯಪ್ರವೇಶಿಸಿ,ಆ ಭೂಮಿಯ ಹಕ್ಕುಪತ್ರಗಳನ್ನು ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೊರೇಷನ್ ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಈ ಪ್ರಕ್ರಿಯೆಯನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಲು ಮೈಸೂರು ಜಿಲ್ಲಾಧಿಕಾರಿಗಳಿಗೆ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ನಿರ್ದೇಶಿಸಬೇಕು ಎಂದು ಅಶೋಕ್ ಸಲಹೆ ನೀಡಿದ್ದಾರೆ.
ಕರ್ನಾಟಕದ ರೇಷ್ಮೆ ಕ್ಷೇತ್ರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕೆಲವು ದೂರದೃಷ್ಟಿಯ ನಿರ್ಧಾರಗಳನ್ನು ಕೈಗೊಳ್ಳಬೇಕು.ಕೆಎಸ್ಐಸಿ ಕಾರ್ಖಾನೆಯ ಸಮೀಪದಲ್ಲಿ 500 ಎಕರೆ ಭೂಮಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ “ಸಿಲ್ಕ್ ಸಿಟಿ” ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದೂ ಕೂಡಾ ಸಲಹೆ ನೀಡಿದ್ದಾರೆ.
ಕರ್ನಾಟಕಕ್ಕೆ ಶತಮಾನಗಳಷ್ಟು ಹಳೆಯ ರೇಷ್ಮೆ ಪರಂಪರೆ ಇದೆ. ಸರಿಯಾದ ದೃಷ್ಟಿಕೋನ ಇದ್ದರೆ ಮತ್ತು ಅಗತ್ಯ ಮೂಲಸೌಕರ್ಯ ನೀಡಿ ಅಭಿವೃದ್ಧಿ ಪಡಿಸಿದರೆ, ಮೈಸೂರು ವಿಶ್ವದ ಮಟ್ಟದಲ್ಲಿ ಸಿಲ್ಕ್ ರಾಜಧಾನಿಯಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ.
ಆದ್ದರಿಂದ ರಾಜ್ಯ ಸರ್ಕಾರ ಕೆಎಸ್ಐಸಿ ಭೂಮಿಯನ್ನು ರಕ್ಷಿಸಿ, ರೇಷ್ಮೆ ಪರಿಸರ ವ್ಯವಸ್ಥೆಯನ್ನು ಬಲಪಡಿಸಿ, ರೈತರು, ನೇಕಾರರು, ವ್ಯಾಪಾರಿಗಳು ಮತ್ತು ರಾಜ್ಯದ ಆರ್ಥಿಕತೆಗೆ ದೀರ್ಘಕಾಲಿಕವಾಗಿ ಉಪಯೋಗವಾಗುವಂತಹ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದು ಪ್ರತಿಪಕ್ಷ ನಾಯಕರು ಒತ್ತಾಯಿಸಿದ್ದಾರೆ.

