ಬಿಜೆಪಿಯವರ ಅಧಿಕಾರದಲ್ಲಿ ಶ್ರೀಮಂತರ ಬಡವರ ನಡುವಿನ ಅಂತರ ಹೆಚ್ಚಿದೆ-ಸಿಎಂ

ಬಾಗಲಕೋಟೆ: ಬಡವರಿಗೆ ಶಕ್ತಿ ತುಂಬವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಜನರು ಭಾರಿ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಬಾಗಲಕೋಟೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿದರು.

ನಮ್ಮ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ ಮತ್ತು ಸಾಮಾಜಿಕ ಬಲ ತುಂಬಲು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಉದ್ಯೋಗದ ಭರವಸೆಯನ್ನು ನುಂಗುವ ವಿಬಿಜಿರಾಮ್ ಜಿ ಯೋಜನೆಯನ್ನು ತಂದಿದೆ. ಕೇಂದ್ರ ಬಿಜೆಪಿಯವರಿಂದ ಕೇವಲ ಕಾರ್ಪೊರೇಟ್ ಶಕ್ತಿಗಳು ಬಲಗೊಳ್ಳುತ್ತಿದ್ದು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ ಎಂದು ಸಿಎಂ ಆರೋಪಿಸಿದರು.

ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಟ್ಟುಕೊಂಡಿರುವ ಪಕ್ಷ ನಮ್ಮದು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ರಕ್ಷಣೆ ದೊರೆಯಬೇಕು. ದುರ್ಬಲ ವರ್ಗದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಶಕ್ತಿ ಯಿಲ್ಲದವರಿಗೆ ಆದ್ಯತೆ ಮೇರೆಗೆ ರಕ್ಷಣೆ ನೀಡಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ,ಇದು ನಮ್ಮ ಸರ್ಕಾರದ ಧ್ಯೇಯ ಎಂದು ತಿಳಿಸಿದರು.

ನರೇಂದ್ರ ಮೋದಿಯವರು 2014 ರಲ್ಲಿ ಹೇಳಿದ್ದನ್ನು ಇಲ್ಲಿಯವರೆಗೂ ಜಾರಿ ಮಾಡಿಲ್ಲ. ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಬಡತನ ಹೋಗುತ್ತದೆ, ನಿರುದ್ಯೋಗ ಹೋಗಲಾಡಿಸಲಾಗುತ್ತದೆ, ರೈತರ ಆದಾಯ ದುಪ್ಪಟಾಗುತ್ತದೆ ಎಂದೆಲ್ಲಾ ಹೇಳಿದ್ದರು. ಒಳ್ಳೆ ದಿನಗಳು ಬರಲಿಲ್ಲ, ರೈತರ ಆದಾಯವೂ ಎರಡು ಪಟ್ಟು ಆಗಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿ ಮನೆಗೆ 15 ಲಕ್ಷ ರೂಪಾಯಿ ಕೊಡುತ್ತೇನೆ ಎಂದಿದ್ದರು, ಕೊಟ್ಟರೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ದೇಶದಲ್ಲಿ ರೈತರಿಗೆ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದು, ಮಲ ಹೊರುವ ಪದ್ದತಿ ನಿಷೇಧ, ಸಾಲ ಮನ್ನಾ ಮಾಡಿದ್ದು, ಕಾಂಗ್ರೆಸ್ ಸರ್ಕಾರ. ಬಿಜೆಪಿ 28 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದರೆ ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ. ನಮ್ಮ ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿ ಮಾಡಿದೆ ಇದನ್ನು ಬಿಜೆಪಿ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಅಂತ್ಯೋದಯ, ಸರ್ವೋದಯ ಮಂತ್ರವನ್ನು ಮಹಾತ್ಮಾ ಗಾಂಧಿ ನೀಡಿದ್ದರು. ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಲು ಪ್ರತಿಯೊಬ್ಬರೂ , ಸಾಮಾಜಿಕ, ಶೈಕ್ಷಣಿಕವಾಗಿ ಪ್ರಬಲರಾಗಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.