ಬೆಂಗಳೂರು: ರಾಜ್ಯದಲ್ಲಿ ಹೊಸ ಸಿಎಂ ಅಧಿಕಾರಕ್ಕೆ ಬಂದ ದಿನದಿಂದಲೂ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಸಿಎಂ ನಡುವಿನ ಶೀತಲ ಸಮರ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬಿಡಿಎ ಮತ್ತು ಬಿಎಂಆರ್‌ಡಿಎ ಕೈತಪ್ಪಿದ ಅಸಮಾಧಾನವೋ, ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಗೆ ನಾಲ್ಕು ದಿನ ಕಾದು ಬರಿಗೈಯಲ್ಲಿ ವಾಪಸ್ಸಾದ ನಿರಾಸೆಯೋ ಗೊತ್ತಿಲ್ಲ. ಆದರೆ ಈಗ ಸಚಿವರ ಬಾಯಿಂದಲೇ ಕಾಂಗ್ರೆಸ್ ಸರ್ಕಾರದ ಬ್ರಾಂಡ್ ಬೆಂಗಳೂರು ಮುಖವಾಡ ಕಳಚಿ ಬೀಳುತ್ತಿದೆ
ಎಂದು ಟ್ವೀಟ್ ಮಾಡಿ ಅಶೋಕ್ ಟೀಕಿಸಿದ್ದಾರೆ.
ಖುದ್ದು ಬೆಂಗಳೂರು ಅಭಿವೃದ್ಧಿ ಸಚಿವರೇ ತಮ್ಮದೇ ಸರ್ಕಾರದ ಯೋಜನೆಗಳ ಬಗ್ಗೆ ಪ್ರಶ್ನೆ ಎತ್ತುತ್ತಿರುವುದು ಕಾಂಗ್ರೆಸ್ ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಬಿಲ್ ಮಾಡುವುದಕ್ಕೇ ಕಾಮಗಾರಿ ಮಾಡುತ್ತೀರಾ..
ಇದು ವಿರೋಧ ಪಕ್ಷದ ಆರೋಪವಲ್ಲ.
ಖುದ್ದು ಸಚಿವ ಕೃಷ್ಣ ಬೈರೇಗೌಡರು ಬಿ-ಸ್ಕ್ವೇರ್ ಅಧಿಕಾರಿಗಳಿಗೆ ಕೇಳಿರುವ ಪ್ರಶ್ನೆ
ಅಥವಾ ಪರೋಕ್ಷವಾಗಿ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹಿಂದೆ ನಿರ್ವಹಿಸಿದ್ದ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯ ಮೇಲೆ ಎತ್ತಿರುವ ಪ್ರಶ್ನೆ ಎಂದು ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಹಾಗೂ ಮೇಲ್ಸೇತುವೆ ಕಾಮಗಾರಿಗಳು ಅಭಿವೃದ್ಧಿಗಾಗಿಯೇ ನಡೆಯುತ್ತಿವೆಯೇ, ಅಥವಾ ಬಿಲ್ ಪಾಸ್ ಮಾಡಿ ಕಮಿಷನ್ ಪಡೆಯುವುದಕ್ಕಾಗಿಯೇ ನಡೆಯುತ್ತಿವೆಯೇ ಎಂಬ ಅನುಮಾನವನ್ನು ಅವರೇ ವ್ಯಕ್ತಪಡಿಸಿದ್ದಾರೆ.
ಜೆ.ಸಿ. ರಸ್ತೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಿದ ಬಳಿಕ ಅದೇ ರಸ್ತೆಯ ಮೇಲೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಅಗತ್ಯವೇನು,
ಸಾರ್ವಜನಿಕರ ತೆರಿಗೆ ಹಣವನ್ನು ಹೀಗೆ ಮಣ್ಣುಪಾಲು ಮಾಡುವ ಯೋಜನೆ ರೂಪಿಸಿದ ಮಹಾ ನಾಯಕ ಯಾರು ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಮೊದಲು ರಸ್ತೆ ನಿರ್ಮಿಸಿ, ನಂತರ ಅದೇ ರಸ್ತೆಯ ಮೇಲೆ ಮತ್ತೊಂದು ಯೋಜನೆ ತರುವುದು ಅಭಿವೃದ್ಧಿಯೇ ಅಥವಾ ದುಂದುವೆಚ್ಚವೇ?
ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹಿಂದೆ ನಿರ್ವಹಿಸಿದ್ದ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅವಧಿಯ ಯೋಜನೆಗಳ ಬಗ್ಗೆ ಈಗಿನ ಸಚಿವರೇ ಪ್ರಶ್ನೆ ಎತ್ತುತ್ತಿರುವುದು ರಾಜ್ಯ ಸರ್ಕಾರದ ಒಳಜಗಳ, ಮುಸುಕಿನ ಗುದ್ದಾಟ, ಶೀತಲ ಸಮರಕ್ಕೆ ಕನ್ನಡಿ ಹಿಡಿದಿದೆ ಎಂದು ಪ್ರತಿಪಕ್ಷ ನಾಯಕ ಚಾಟಿ ಬೀಸಿದ್ದಾರೆ.
ಇಬ್ಬರು ನಾಯಕರ ಅಧಿಕಾರ ಹಂಚಿಕೆಯ ಕಿತ್ತಾಟ, ಕಲೆಕ್ಷನ್ ಪೈಪೋಟಿ ಮತ್ತು ಕುರ್ಚಿ ರಾಜಕಾರಣದ ನಡುವೆ ಇಡೀ ಬೆಂಗಳೂರಿನ ಮೂಲಸೌಕರ್ಯ ನರಕಸದೃಶವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಕಮಿಷನ್ ಭರಾಟೆ, ಮತ್ತೊಂದು ಕಡೆ ಅಧಿಕಾರಿಗಳ ಮೇಲೆ ನಾಟಕೀಯ ತರಾಟೆ.
ಮಗುವನ್ನು ಚಿವುಟಿ, ತೊಟ್ಟಿಲು ತೂಗುವ ಬೂಟಾಟಿಕೆ ರಾಜಕಾರಣವನ್ನು ಅರಿಯದಷ್ಟು ಮುಗ್ಧರಲ್ಲ ಕನ್ನಡಿಗರು.
ಕನ್ನಡಿಗರ ತೆರಿಗೆ ಹಣ, ಬೆಂಗಳೂರಿನ ಅಭಿವೃದ್ಧಿ ಮತ್ತು ಜನರ ಭವಿಷ್ಯದ ಜೊತೆ ಆಟವಾಡುತ್ತಿರುವ ಈ ಕಮಿಷನ್ ಸರ್ಕಾರಕ್ಕೆ ಜನರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

