ಸಂಸತ್ತಿನಲ್ಲಿ‌ ಮಾತಾಡದೆ ರಾಹುಲ್ ಗಾಂಧಿ ಪಲಾಯನ-ಅಶೋಕ ಟೀಕೆ

ಬೆಂಗಳೂರು: ನೀಟ್‌ ಅಕ್ರಮದ ಕುರಿತು ಲೋಕಸಭೆಯಲ್ಲಿ ಮಾತಾಡಬೇಕಾದ ರಾಹುಲ್‌ ಗಾಂಧಿ ಪಲಾಯನ ಮಾಡಿ ಕಾಕ್ರೋಚ್‌ ಜನತಾ ಪಾರ್ಟಿ ಜೊತೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಾಕ್ರೋಚ್ ಪಾರ್ಟಿಯವರು ಸಂಧಾನಕ್ಕೆ ಬರುತ್ತಿಲ್ಲ, ರಾಹುಲ್‌ ಗಾಂಧಿ ಅಧಿವೇಶನಕ್ಕೆ ಬರುತ್ತಿಲ್ಲ ಎಂದು ಟೀಕಿಸಿದರು.

ಚುನಾಯಿತ ಪ್ರತಿನಿಧಿಗಳು ಸಂಸತ್ತಿನಲ್ಲಿ ಮಾತಾಡಿ ಜನರಿಗೆ ನಿಜವಾದ ವಿಚಾರವನ್ನು ತಿಳಿಸಿಕೊಡಬೇಕು. ಆದರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಮಾತಾಡುವುದು ಬಿಟ್ಟು ಪಲಾಯನ ಮಾಡಿದ್ದಾರೆ. ಲೋಕಸಭೆಯಲ್ಲಿ ಉತ್ತರ ಸಿಗದಿದ್ದರೆ ಹೋರಾಟ ಮಾಡಬೇಕು ಎಂದು ಹೇಳಿದರು ‌

ಕಾಕ್ರೋಚ್‌ ಪಾರ್ಟಿಯ ಪ್ರತಿಭಟನೆಯಲ್ಲಿ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಕೂಗಿದ್ದ ಘೋಷಣೆಯನ್ನೇ ಕೂಗಲಾಗಿದೆ. ಇದನ್ನು ಆಯೋಜಿಸಿರುವವರು ವಿದೇಶದಲ್ಲಿದ್ದು, ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ರಾಹುಲ್‌ ಗಾಂಧಿ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ ಅವಧಿಯಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಆಗ ಕಾಂಗ್ರೆಸ್‌ ಏನು ಮಾಡಿತ್ತು ಎಂದು ತಿಳಿಸಲಿ ಇವೆಲ್ಲವನ್ನೂ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಪಿಎಸ್‌ಸಿಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಸರಿಯಾಗಿ ಭಾಷಾಂತರ ಮಾಡುವ ವ್ಯವಸ್ಥೆ ಇಲ್ಲ. ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಾಗ ಅದಕ್ಕೆ ಪರಿಹಾರ ನೀಡಲಿಲ್ಲ. ಯುಪಿಎ ಯುಪಿಎ ಆಡಳಿತದ ಅವಧಿಯಲ್ಲಿ AIIMS, AIEEE, CPMT ಸೇರಿದಂತೆ ಹಲವು ರಾಷ್ಟ್ರೀಯ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿತಗತು, ಅಕ್ರಮಗಳೂ ನಡೆದಿದ್ದವು. ಆಗ ಕಾಂಗ್ರೆಸ್ ವ್ಯವಸ್ಥೆಯನ್ನು ಸುಧಾರಿಸಿತ್ತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತೆ ಎಂದು ಪ್ರತಿಪಕ್ಷ ನಾಯಕ ಖಾರವಾಗಿ ಪ್ರಶ್ನಿಸಿದರು.

ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೈದ್ಯಕೀಯ ಶಿಕ್ಷಣದಲ್ಲಿ ಐತಿಹಾಸಿಕ ವಿಸ್ತರಣೆ ಆಗಿದೆ, ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಹೆಚ್ಚಿಸಿದ ಸರ್ಕಾರದ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದರು.

ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ 11 ಯುವಜನರು ಸತ್ತಾಗ ಅದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಿಲ್ಲ. ಪ್ರಧಾನಿಗಳು ಸಿಬಿಐ ತನಿಖೆ ಮಾಡಿಸಿ ಎಲ್ಲರನ್ನೂ ಜೈಲಿಗೆ ಹಾಕಿಸಿದ್ದಾರೆ. ಆದರೆ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. 11 ಮಕ್ಕಳ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಲಾಗಿದೆ. ಆ 11 ಕುಟುಂಬಗಳ ಕಣ್ಣೀರಿನ ಹೊಣೆ ಯಾರು ಹೊರುತ್ತಾರೆ? ಇಷ್ಟು ದೊಡ್ಡ ದುರಂತ ನಡೆದರೂ ಮುಖ್ಯಮಂತ್ರಿ ರಾಜೀನಾಮೆ ಕೊಡಲಿಲ್ಲ. ಉಪಮುಖ್ಯಮಂತ್ರಿ ರಾಜೀನಾಮೆ ಕೊಡಲಿಲ್ಲ. ಗೃಹ ಸಚಿವರು ರಾಜೀನಾಮೆ ಕೊಡಲಿಲ್ಲ. 11 ಯುವಕರ ಸಾವಿನ ಮೇಲೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವ ರಾಜ್ಯ ಸರ್ಕಾರಕ್ಕೆ ಯುವಕರ ಬಗ್ಗೆ ಮಾತನಾಡಲು‌ ನೈತಿಕತೆ ಇಲ್ಲ ಎಂದು ಗುಡುಗಿದರು.

ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಮೊದಲು ಸಿದ್ದರಾಮಯ್ಯ ಹಾಗೂ ಸಿಎಂ ಡಿಕೆ ಶಿವಕುಮಾರ್ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು ಎಂದು ಅಶೋಕ ಟಾಂಗ್ ನೀಡಿದರು.

ರಾಷ್ಟ್ರೀಯ ಪರೀಕ್ಷೆಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ಮೊದಲು ಕೆಪಿಎಸ್‌ಸಿಯನ್ನು ಸರಿಪಡಿಸಬೇಕು. ಒಂದೇ ಒಂದು ಕೆಪಿಎಸ್‌ಸಿ ಪರೀಕ್ಷೆಯನ್ನು ಕೂಡ ದೋಷ ರಹಿತವಾಗಿ ನಡೆಸಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು‌

ಬಿಜೆಪಿ ಕಚೇರಿಯ ಮುಂದೆ ಅನೇಕ ಬಾರಿ ಕಾಂಗ್ರೆಸ್‌ ಪ್ರತಿಭಟನೆ ಮಾಡಿದ್ದಾಗಲೂ ಬಿಜೆಪಿ ಸರ್ಕಾರ ಪ್ರಕರಣ ದಾಖಲಿಸಿರಲಿಲ್ಲ. ಪೊಲೀಸರು ಕಾಂಗ್ರೆಸ್‌ ಪರವಾಗಿ ನಿಂತಿದ್ದಾರೆ. ಈ ದ್ವಂದ್ವವನ್ನು ಪೊಲೀಸರು ಆಯುಕ್ತರು ಕೈ ಬಿಡಬೇಕು. ಆಯುಕ್ತರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಬಿಜೆಪಿ ಶಾಸಕರ ಮೇಲೆಯೇ ಮೊಟ್ಟೆ ಬಿದ್ದಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಅಶೋಕ ಆರೋಪಿಸಿದರು.