ಬೆಂಗಳೂರು: ಹೊಸ ಸಚಿವ ಸಂಪುಟದಲ್ಲಿ ಭ್ರಷ್ಟಾಚಾರಿಗಳು ತುಂಬಿದ್ದು, ಅನೇಕರು ಪೇಮೆಂಟ್ ಮೂಲಕ ಬಂದು ಸೇರಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಬಾಂಬ್ ಸಿಡಿಸಿದ್ದಾರೆ.
ಇದನ್ನ ನೋಡಿದರೆ ಸಚಿವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಮುಖ್ಯಮಂತ್ರಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಿಂದೆಂದೂ ಕಂಡಿರದ ಸಚಿವ ಸಂಪುಟ ರಚನೆಯಾಗಿದೆ. ಪರಿಶಿಷ್ಟರ 187 ಕೋಟಿ ರೂ. ಲೂಟಿ ಮಾಡಿ ಚುನಾವಣೆಗೆ ಬಳಸಿರುವುದು ಖಚಿತವಾಗಿದೆ. ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದರು. ಈ ಪ್ರಕರಣದಲ್ಲಿ ಬಿ.ನಾಗೇಂದ್ರ ಜೈಲಿಗೆ ಹೋದರು, ಈಗ ಮತ್ತೆ ಸಚಿವ ಸಂಪುಟ ಸೇರಿದ್ದಾರೆ. ಅವರಿಗೆ ಕ್ಲೀನ್ ಚಿಟ್ ಕೊಟ್ಟವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.
ಹಳೆ ಸಿಎಂ ಅವರನ್ನು ತೆಗೆದುಹಾಕಿದರೆ,ಈಗ ಹೊಸ ಸಿಎಂ ವಾಷಿಂಗ್ ಮಿಶನ್ ಬಳಸಿ ತೊಳೆದು ಕರೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಕರಾವಳಿ-ಮಲೆನಾಡು ಭಾಗಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಅಲ್ಲಿ ನಾವು ಹೇಗಿದ್ದರೂ ಸೋಲಲಿದ್ದೇವೆ ಎಂಬುದನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಯಾದಗಿರಿ, ರಾಯಚೂರು, ವಿಜಯನಗರ, ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಹಿಂದುಳಿದ ಜಿಲ್ಲೆಗಳಲ್ಲಿ ಸಚಿವರೇ ಇಲ್ಲ. ಬಹಳ ಸಮುದಾಯಗಳನ್ನು ಪ್ರತಿನಿಧಿಸುವವರೂ ಇಲ್ಲ ಎಂದರು.
ಕೆಲವು ಶಾಸಕರು, ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದು, ಒಬ್ಬರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ ಕೇಸು ದಾಖಲಿಸುತ್ತಾರೆ. ಈಗ ಅನೇಕ ಕಡೆ ಕಾಂಗ್ರೆಸ್ ಕಾರ್ಯಕರ್ತರೇ ಕೈಗೇ ಏನೇನೂ ತೆಗೆದುಕೊಂಡು ಸಿಎಂ ಭಾವಚಿತ್ರಕ್ಕೆ ಹೊಡೆದಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಸಚಿವ ಸಂಪುಟದಲ್ಲಿ ಹೊಸತನವಿಲ್ಲ, ಅದೇ ಮುಖಗಳು, ಭ್ರಷ್ಟಾಚಾರಿಗಳನ್ನು ಮರಳಿ ಸಂಪುಟಕ್ಕೆ ತರಲಾಗಿದೆ. ಇದು ಸಿಎಂ ಡಿ.ಕೆ.ಶಿವಕುಮಾರ್ ಅವರ ಪಟ್ಟಿಯಲ್ಲ, ಪೇಮೆಂಟ್ ಲಿಸ್ಟ್ ಎಂದು ತಿಳಿದುಬಂದಿದೆ. ಏಕೆಂದರೆ ದಿಢೀರನೆ ಮಂಕಾಳು ವೈದ್ಯ ಅವರ ಹೆಸರು ತೆಗೆದುಹಾಕಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹೆಸರು ಸೇರಿಸಲಾಗಿದೆ ಇದು ಕಾಂಚಾಣದ ಮಹಿಮೆ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.
ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನ ನೀಡಿಲ್ಲ. ಚುನಾವಣೆಗೆ ಮುನ್ನ ಮಹಿಳೆಯರ ಸಬಲೀಕರಣದ ಬಗ್ಗೆ ಉದ್ದುದ ಮಾತನಾಡಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಶೇ.12ರಷ್ಟಿರುವ ಮುಸ್ಲಿಮರಿಗೆ 3 ಸ್ಥಾನ ನೀಡಲಾಗಿದೆ.ಆದರೆ ಶೇ. 50ರಷ್ಟಿರುವ ಮಹಿಳೆಯರಿಗೆ ಶೂನ್ಯ ಸ್ಥಾನ ನೀಡಲಾಗಿದೆ. ಗಾಯತ್ರಿ ಶಾಂತಗೌಡರು ಪ್ರೆಸ್‌ಮೀಟ್ ಮಾಡಿ ಮಾತಾಡಿದ್ದರು. ಕೊನೆಗೆ ಅವರಿಗೆ ಖಾತೆಯೇ ಇಲ್ಲವಾಯಿತು. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ದ್ರೋಹ. ಈ ಸರ್ಕಾರ ಇದುವರೆಗೆ ಟೆಕಾಫ್ ಆಗಿಲ್ಲ, ಇನ್ನು ಮುಂದೆಯೂ ಆಗುವುದಿಲ್ಲ ಎಂದು ಭವಿಷ್ಯ ನುಡಿದರು.
ಕಾವೇರಿ ನೀರು ಹಂಚಿಕೆಗಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದರಿಂದಾಗಿ ನಮಗೆ ಗಂಡಾಂತರ ಕಾದಿದೆ ಎಂಬುದು ಸ್ಪಷ್ಟವಾಗಿದೆ. ಸಿಎಂ ಜೋಸೆಫ್ ವಿಜಯ್ ಜೊತೆ ಹೊಂದಾಣಿಕೆ ಮಾಡಿಕೊಂಡು ನೀರು ಹರಿಸಿದರೆ ಜನರು ಸುಮ್ಮನಿರುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಸೋತರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಟಿವಿಕೆಗೆ ಶರಣಾಗಿದೆ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಅಶೋಕ್ ತಿಳಿಸಿದರು.

