ಕರ್ನಾಟಕದಲ್ಲಿ ನಡೆದ ಗಂಭೀರ ಘಟನೆಗಳಿಗೆ ಯಾರು ನೈತಿಕ ಹೊಣೆ ಹೊರುತ್ತಾರೆ:ಅಶೋಕ

ಬೆಂಗಳೂರು: ಕೇಂದ್ರದಲ್ಲಿ ನೀಟ್ ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದಾರೆ, ಕರ್ನಾಟಕದಲ್ಲಿ ನಡೆದ ಗಂಭೀರ ಘಟನೆಗಳಿಗೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊರುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.

ಕೆ ಪಿ ಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಒಂದು ಹುದ್ದೆಗೆ 80 ಲಕ್ಷ ಡೀಲ್ ನಡೆದಿರುವ ಆರೋಪದ ಆಡಿಯೋ ಬಹಿರಂಗವಾಗಿದೆ. ಈ ಆರೋಪಗಳ ಕುರಿತು ಸಮಗ್ರ, ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ಯಾವಾಗ ನಡೆಸುತ್ತಾರೆ, ಇದರ ಹೊಣೆ ಯಾರು ಹೊರುತ್ತಾರೆ ಯಾರು ರಾಜೀನಾಮೆ ಕೊಡುತ್ತಾರೆ ಎಂದು ಟ್ವೀಟ್ ಮಾಡಿ ಕೇಳಿದ್ದಾರೆ.

ಐಪಿಎಲ್ ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ 11 ಅಮಾಯಕ ಜೀವಗಳು ಬಲಿಯಾದವು, ಆ ದುರಂತಕ್ಕೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊತ್ತರು, ನೊಂದ ಕುಟುಂಬಗಳಿಗೆ ಸಂಪೂರ್ಣ ನ್ಯಾಯ ಯಾವಾಗ ದೊರೆಯುತ್ತದೆ, ಇದರ ಹೊಣೆ ಯಾರು ಹೊರುತ್ತಾರೆ ಯಾರ ರಾಜೀನಾಮೆ ನೀಡುತ್ತಾರೆ ಎಂದು ವ್ಯಂಗ್ಯ ವಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ತಡೆಯಲಾರದೆ ನೂರಾರು ಬಡವ ಸಾಲಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆಲ್ಲ ಯಾರು ಹೊಣೆ ಉತ್ತರಿಸಲಿ ಎಂದು ಅಶೋಕ ಆಗ್ರಹಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎಂದರೆ ಕೇವಲ ಹುದ್ದೆಯಲ್ಲ, ಅದರೊಂದಿಗೆ ಜವಾಬ್ದಾರಿಯೂ ಇರುತ್ತದೆ. ತಪ್ಪುಗಳು ನಡೆದಾಗ ಅಧಿಕಾರಿಗಳ ಮೇಲೆ ಗೂಬೆ ಕೂರಿಸದೆ, ನಾಮಕಾವಸ್ತೆ ತನಿಖೆಗಳ ಹೆಸರಿನಲ್ಲಿ ತಪ್ಪಿಸಿಕೊಳ್ಳದೆ ಉತ್ತರದಾಯಿತ್ವ ಸ್ವೀಕರಿಸಬೇಕು. ಪ್ರತಿಯೊಂದು ಪ್ರಕರಣದಲ್ಲೂ ಸತ್ಯ ಹೊರಬರಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗಬೇಕು ಹಾಗೂ ಜನರ ವಿಶ್ವಾಸವನ್ನು ಮರು ಸ್ಥಾಪಿಸುವ ಕಾರ್ಯ ನಡೆಯಬೇಕು ಎಂದು ಪ್ರತಿಪಕ್ಷ ನಾಯಕ ಆಗ್ರಹಿಸಿದ್ದಾರೆ.