ಬೆಂಗಳೂರು: ಕಳೆದ ತಿಂಗಳ ಅಂತ್ಯದಲ್ಲಿ ಬೆಂಗಳೂರು– ಮೈಸೂರು ಇನ್‌ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಕುರಿತು ಸಿಎಂ ಗೆ ಪತ್ರ ಬರೆದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು,ಇಡೀ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ನೀಡಿರುವ ನಿರ್ದೇಶನಗಳಂತೆ ಹಾಗೂ ವಿಧಾನಸಭೆ ಸದನ ಸಮಿತಿ ಮತ್ತು ಸಚಿವ ಸಂಪುಟದ ಉಪ ಸಮಿತಿಗಳ ಶಿಫಾರಸುಗಳಲ್ಲಿ ದಾಖಲಿಸಿರುವಂತೆ ನೈಸ್ ಸಂಸ್ಥೆ ರಸ್ತೆ ಯೋಜನೆ ಅನುಷ್ಠಾನದಲ್ಲಿ ಚೌಕಟ್ಟು ಒಪ್ಪಂದ ಮತ್ತು ಯೋಜನಾ ತಾಂತ್ರಿಕ ಒಪ್ಪಂದ ಗಳಲ್ಲಿರುವ ನಿಬಂಧನೆ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಕಠಿಣ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೈಸ್ ಸಂಸ್ಥೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ಅನ್ನು ತತ್‌ಕ್ಷಣ ಜಾರಿಗೆ ಬರುವಂತೆ ನಿಷೇಧಿಸಬೇಕು ಹಾಗೂ ಒಂದು ಶಾಸನವನ್ನು ರಚಿಸುವ ಮೂಲಕ ನೈಸ್ ರಸ್ತೆ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದಲ್ಲಿ ಹೆಚ್ ಡಿ ಕೆ ಒತ್ತಾಯಿಸಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠ ತನ್ನ ತೀರ್ಮಾನದಲ್ಲಿ ಉಲ್ಲೇಖಿಸಿರುವಂತೆ; 2003 ಮತ್ತು 2009ರಲ್ಲಿ ರೈತರಿಂದ ಭೂಮಿ ಸ್ವಾಧೀನ ಮಾಡಿಕೊಂಡಿದ್ದರೂ ಈವರೆಗೂ ರೈತರಿಗೆ ಸಲ್ಲಬೇಕಾಗಿರುವ ಭೂ ಪರಿಹಾರ ನಿಗದಿಪಡಿಸಿರುವುದಿಲ್ಲ. ಯೋಜನೆ ಅನುಷ್ಠಾನಕ್ಕೆ ಹಲವಾರು ಅಡ್ಡಿ – ಆತಂಕಗಳು ಬಂದರೂ ವಿವಿಧ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳ ಅನ್ವಯ ಭೂಸ್ವಾಧೀನ ಪ್ರಕ್ರಿಯೆಗಳು ಅಂದಿಗೆ ಅಂತ್ಯಗೊಂಡಿವೆ ಮತ್ತು ನೈಸ್ ಯೋಜನೆಯು ಸಹ ಅಂತಿಮ ರೂಪ ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಆದೇಶಗಳಲ್ಲಿ ಭೂಸ್ವಾದೀನ ಮತ್ತು ಚೌಕಟ್ಟು ಒಪ್ಪಂದ ಮತ್ತು ತಾಂತ್ರಿಕ ಒಪ್ಪಂದ ಅನುಷ್ಠಾನದಲ್ಲಿ ನೈಸ್ ಸಂಸ್ಥೆಯು ಎಸಗಿರುವ ಅನೇಕ ಅಕ್ರಮ ಮತ್ತು ಅವ್ಯವಹಾರಗಳನ್ನು ಬಯಲಿಗೆ ಎಳೆಯಲಾಗಿದೆ ಎಂಬುದನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ ಅವರ ನೇತೃತ್ವದ ಸದನ ಸಮಿತಿಯು ನೀಡಿದ್ದ ವರದಿಯಲ್ಲಿ ನೈಸ್ ಯೋಜನೆ ಅಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ. 12-12-2016ರಲ್ಲಿ ನೀಡಿರುವ ಸದನ ಸಮಿತಿ ವರದಿಯಲ್ಲಿ ಅಡಕವಾಗಿರುವ ಕ್ರೂಢೀಕೃತ ಶಿಫಾರಸ್ಸುಗಳ ಬಗ್ಗೆಯೂ ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡಿಕೊಂಡ ಜಮೀನುಗಳನ್ನು ಉದ್ದೇಶಿತ ಉದ್ದೇಶಕ್ಕೆ ಬಳಸಬೇಕೆ ಹೊರತು ಯೋಜನಾ ಸಂಸ್ಥೆ ಈ ಜಮೀನುಗಳನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ ಎಂದು ತಿಳಿಸಿದ್ದಾರೆ.
ನೈಸ್ ಸಂಸ್ಥೆಯ ಟೋಲ್ ರೋಡ್ ನಿರ್ಮಾಣಕ್ಕೆ 6999 ಎಕರೆ ಹಾಗೂ ಐದು ಟೌನ್‌ಶಿಪ್ ನಿರ್ಮಾಣಕ್ಕೆ 13237 ಎಕರೆ ಸೇರಿ ಒಟ್ಟು 20193 ಎಕರೆ ಭೂಮಿಯನ್ನು ಚೌಕಟ್ಟು ಒಪ್ಪಂದದಂತೆ ಸರ್ಕಾರದಿಂದ ಪಡೆಯಬೇಕು. ಆದರೆ ಈ ಸಂಸ್ಥೆ ಸುಪ್ರಿಂ ಕೋರ್ಟ್‌ನಲ್ಲಿ ಹೂಡಿದ ನ್ಯಾಯಾಂಗ ನಿಂದನೆ ಅರ್ಜಿ ಕಾರಣಕ್ಕಾಗಿ ಒಪ್ಪಂದಗಳ ನಡುವೆ ವ್ಯತ್ಯಾಸವಾಗಿ ನಮೂದು ಆಗಿರುವ ವಿಸ್ತೀರ್ಣವನ್ನು ದಾಖಲಿಸಿ ಮಂಜೂರಾತಿ ಕೇಳಿತು ಮತ್ತು ಚೌಕಟ್ಟು ಒಪ್ಪಂದದಲ್ಲಿ ನಮೂದು ಆಗಿರುವ 20193 ಎಕರೆಗೆ ಸೀಮಿತವಾಗುವುದಾಗಿ ಹೇಳಿ, ಟೌನ್‌ಶಿಪ್‌ಗಳಿಗೆ ನಿಗದಿಯಾಗಿದ್ದ 13194 ಎಕರೆಗಳ ಪೈಕಿ 2469.86 ಎಕರೆ ಭೂಮಿಯನ್ನು ಟೋಲ್ ರಸ್ತೆಗೆ ಸೇರಿಸಿ ಒಟ್ಟು 9448.86 ಎಕರೆ ಜಮೀನು ಟೋಲ್ ರಸ್ತೆಗೆ ಅವಶ್ಯವೆಂದು ವಾದಿಸಿದೆ. ಸಂಸ್ಥೆಯ ಇಂತಹ ಕ್ರಮಗಳು ಚೌಕಟ್ಟು ಒಪ್ಪಂದ ಮತ್ತು ತಾಂತ್ರಿಕ ಒಪ್ಪಂದಗಳ ನಿಬಂಧನೆ ಮತ್ತು ಷರತ್ತುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಕುಮಾರಸ್ವಾಮಿ ವಿವರಿಸಿದ್ದಾರೆ.
ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠ 29-07-2026ರ ತನ್ನ ತೀರ್ಪಿನಲ್ಲಿ ಬೆಂಗಳೂರು-ಮೈಸೂರು ಇನ್‌ಸ್ಪ್ರಾಸ್ಟ್ರಕ್ಚರ್ ಯೋಜನೆ ಅನುಷ್ಠಾನದಲ್ಲಿ, ನೈಸ್ ಸಂಸ್ಥೆ, ಕೆಐಎಡಿಬಿ ಮತ್ತು ರಾಜ್ಯ ಸರ್ಕಾರಗಳ ಕಾರ್ಯವೈಖರಿ, ನಡವಳಿಕೆ ಮತ್ತು ನೈಸ್ ಸಂಸ್ಥೆಯ ಅಕ್ರಮ ಮತ್ತು ಅವ್ಯವಹಾರಗಳಲ್ಲಿ ಇವರೆಲ್ಲರೂ ಸಹಭಾಗಿಗಳೆಂದು ತೀವ್ರವಾಗಿ ಟೀಕಿಸಿದೆ ಎಂಬ ಅಂಶವನ್ನು ಸಚಿವರು ಉಲ್ಲೇಖ ಮಾಡಿದ್ದಾರೆ.
ವಿಭಾಗೀಯ ಪೀಠವು ನೈಸ್ ಸಂಸ್ಥೆಗೆ ಈ ಯೋಜನೆಯ ಅನುಷ್ಠಾನದಲ್ಲಿ ಆಸಕ್ತಿ ಇಲ್ಲದ ಕಾರಣ ರಾಜ್ಯ ಸರ್ಕಾರ ನೈಸ್ ಯೋಜನೆ ಅನುಷ್ಠಾನ ನೆನೆಗುದಿಗೆ ಬಿದ್ದಿರುವುದರಿಂದ ಈ ಯೋಜನೆ ಅನುಷ್ಠಾನದ ಬಗ್ಗೆ ಕ್ಲಿಷ್ಟವಾಗಿ ವಿಮರ್ಶಿಸಬೇಕು. ಇಲ್ಲವೆಂದರೆ ಈ ಯೋಜನೆಯನ್ನು ರದ್ದು ಪಡಿಸಬೇಕೆಂದು ಸಹ ಸೂಚಿಸಿದೆ.
ಭೂಸ್ವಾಧೀನ ಮಾಡಿಕೊಂಡು 23 ವರ್ಷಗಳು ಕಳೆದು ಭೂಮಿ ಕಳೆದುಕೊಂಡ ರೈತರಿಗೆ ಮತ್ತು ಭೂ ಮಾಲೀಕರಿಗೆ ಭೂ ಪರಿಹಾರ ನೀಡದಿರುವುದರಿಂದ ಇವರೆಲ್ಲರೂ ಬೀದಿ ಪಾಲಾಗಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

