ಮೈಸೂರು, ಅ.18: ನಗರದ ಅಶೋಕಪುರಂ ಬಡಾವಣೆಯಲ್ಲಿ ಸ್ನೇಹಿತನೇ ಸ್ನೇಹಿತನನ್ನು ಮರದ ತುಂಡಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಇದು ಕಳೆದ 4 ವಾರಗಳಲ್ಲಿ ಮೈಸೂರಿನಲ್ಲಿ ನಡೆದ 5ನೇ ಕೊಲೆ ಪ್ರಕರಣವಾಗಿದೆ.
ಕೊಲೆ ಆರೋಪಿ ಅಶೋಕಪುರಂ ನಿವಾಸಿ ನಂದೀಶ್ (40) ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿ ಮಹೇಶ್ 40 ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ನಂದೀಶ್ ಮತ್ತು ಮಹೇಶ್ ಇಬ್ಬರು ಸ್ನೇಹಿತರಾಗಿದ್ದು, ಇಂದು ಬೆಳಿಗ್ಗೆ ಇಬ್ಬರು ಒಟ್ಟಿಗೆ ಕುಳಿತು ಮದ್ಯಪಾನ ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಕೋಪಗೊಂಡ ನಂದೀಶ್, ಅಲ್ಲೇ ಇದ್ದ ಮರದ ತುಂಡಿನಿಂದ ಮಹೇಶ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ವಿದ್ಯಾರಣ್ಯಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಆರೋಪಿ ನಂದೀಶ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮೈಸೂರು ನಗರದಲ್ಲಿ ಕಳೆದ ನಾಲ್ಕು ವಾರಗಳಿಂದ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ನಾಲ್ಕು ವಾರದಲ್ಲಿ ನಡೆದ 5ನೇ ಕೊಲೆ ಪ್ರಕರಣವಾಗಿದ್ದು, ನಗರದಲ್ಲಿ ಜನರಲ್ಲಿ ಆತಂಕ ಮೂಡಿಸಿದೆ.

