ಬೆಂಗಳೂರು: ರಾಜ್ಯದಲ್ಲಿರುವುದು ಜನರ ಸರ್ಕಾರ ಅಲ್ಲ, ಸ್ವಂತ ಪಕ್ಷದವರಿಗೇ ಬೇಡವಾದ, ಭ್ರಷ್ಟ, ದಲಿತ ವಿರೋಧಿ, ರೈತ ವಿರೋಧಿ ಸರ್ಕಾರ ಎಂಬುದು ದಿನಕ್ಕೊಂದು ಉದಾಹರಣೆಯೊಂದಿಗೆ ಸಾಬೀತಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಮ್ಮ ನಾಡಿನ ರೈತರು, ದಲಿತರು ಮತ್ತು ಶೋಷಿತ ಸಮುದಾಯಗಳನ್ನು ವಂಚಿಸುತ್ತಿರುವ ಈ ಜನವಿರೋಧಿ ಸರ್ಕಾರದ ವಿರುದ್ಧ ಈಗ ಸ್ವತಃ ಕಾಂಗ್ರೆಸ್ ನಾಯಕರೇ ರೊಚ್ಚಿಗೆದ್ದು ಬೀದಿಗೆ ಬರುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಛೇಡಿಸುತ್ತಿದ್ದಾರೆ.
ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ 2,500 ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಲು ಯೋಗ್ಯತೆಯಿಲ್ಲದ ಈ ನಾಲಾಯಕ್ ಸರ್ಕಾರವನ್ನು ನೋಡಿ ಸ್ವತಃ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರೇ ನಿನ್ನೆ ಅಸಮಾಧಾನ ಹೊರಹಾಕಿದ್ದರು.
ನಾಡಹಬ್ಬದ ಸಂದರ್ಭದಲ್ಲೇ ದಲಿತ ಸಮುದಾಯಕ್ಕೆ ಸೇರಿದ ಮೂವರು ಸಚಿವರಿಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಬೇಸರ ವ್ಯಕ್ತಪಡಿಸಿದ್ದರು.
ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಪ್ರಶಸ್ತಿಗಳ ದುರುಪಯೋಗ ಬಗ್ಗೆ ಮಾಜಿ ಸಂಸದ ಉಗ್ರಪ್ಪ ಆಕ್ರೋಶ ಹೊರಹಾಕಿದ್ದಾರೆ
ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿದ್ದ 187 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಹೊಡೆದು, ಈಗ ‘ವಾಲ್ಮೀಕಿ ಪ್ರಶಸ್ತಿ’ಗಳನ್ನು ಯಾರ್ಯಾರಿಗೋ ಹಂಚುತ್ತಿರುವ ಕುರಿತು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ವಿ. ಎಸ್. ಉಗ್ರಪ್ಪನವರೇ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
‘ದಲಿತರ ಹಣ ದುರುಪಯೋಗವಾದರೆ ಬೀದಿಗಿಳಿದು ಹೋರಾಟ ಮಾಡಿ’ ಎಂದು ಉಗ್ರಪ್ಪನವರೇ ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆಯ ಕರೆ ನೀಡುತ್ತಿದ್ದಾರೆಂದರೆ, ಈ ಸರ್ಕಾರದ ಜನಪ್ರಿಯತೆ ಎಷ್ಟರ ಮಟ್ಟಿಗಿದೆ ಊಹಿಸಿ ಎಂದು ಅಶೋಕ್ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಪಕ್ಷದಲ್ಲೇ ನಿಮ್ಮ ಸರ್ಕಾರದ ಬಗ್ಗೆ ಈ ಪರಿ ಬೇಸರ, ಅಸಮಾಧಾನ, ಆಕ್ರೋಶ ಇರುವಾಗ ಯಾವ ಮುಖ ಇಟ್ಟುಕೊಂಡು ಕುರ್ಚಿಯಲ್ಲಿ ಮುಂದುವರೆಯುತ್ತೀರಿ, ಅಧಿಕಾರಿದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿದೆ ನಿಮಗೆ ಎಂದು ಪ್ರಶ್ನಿಸಿದ್ದಾರೆ.
ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ. ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ಪೂರ್ಣ. ನಿಮ್ಮದೇ ಪಕ್ಷದ ನಾಯಕರು, ಸಚಿವರೇ ನಿಮ್ಮ ದುರಾಡಳಿತಕ್ಕೆ ರೋಸಿಹೋಗಿ ಬಂಡಾಯವೆದ್ದಿದ್ದಾರೆ.
ಜನರ ಶಾಪ, ಶೋಷಿತರ ಕಣ್ಣೀರು ಮತ್ತು ರೈತರ ಆಕ್ರೋಶ ಈ ಲೂಟಿ ಕಾಂಗ್ರೆಸ್ ಸರ್ಕಾರವನ್ನು ಶೀಘ್ರದಲ್ಲೇ ಧೂಳೀಪಟ ಮಾಡುವುದು ನಿಶ್ಚಿತ ಎಂದು ಅಶೋಕ ಎಚ್ಚರಿಸಿದ್ದಾರೆ.

