ಅಯ್ಯೋ ಪಾಕಿಸ್ತಾನ ….. ತಾನೇ  ತೊಡಿದ ಖೆಡ್ಡದಲ್ಲಿ

ಡಾ.ಗುರುಪ್ರಸಾದ ರಾವ್ ಹವಲ್ದಾರ್

ಪತ್ರಕರ್ತರು ಮತ್ತು ಉಪನ್ಯಾಸಕರು

ಭಾರತಕ್ಕಿಂತ ಒಂದು ದಿನ ಮುಂಚಿತವಾಗಿಯೇ  ಸ್ವಾತಂತ್ರ್ಯ ಪಡೆದ ಪಾಕಿಸ್ತಾನ ,ಸದಾ ಭಾರತವನ್ನು ದ್ವೇಷಿಸುವ ವಿಷಕಾರುವ, ಉಗ್ರರಿಗೆ ಪ್ರೋತ್ಸಾಹ ಕೊಡುವ ಅಲ್ಲಿನ ಆಡಳಿತ, ಸೈನ್ಯವು ತನ್ನ ದೇಶದ ಜನರ ಕಲ್ಯಾಣ, ಅಭಿವೃದ್ಧಿಗೆ ಒತ್ತು ಕೊಡದೇ  ಇಂದು   ಹಿಂದೆಂದೂ ಕಂಡು ಕೇಳರಿಯದಂಥಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಜನರು ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಗೋಧಿ ಹಿಟ್ಟೂ ಕೂಡಾ ಸಿಗದ ಪರಿಸ್ಥಿತಿ ಇದೆ. ಪೆಟ್ರೋಲ್, ಡೀಸೆಲ್ಗೂ ಬರ ಬಂದಿದೆ. ಪಾಕಿಸ್ತಾನದ ಆರ್ಥಿಕ ಸ್ಥಿತಿ ದಿನೇದಿನೆ ಗಂಭೀರ ಸ್ವರೂಪ ಪಡೆಯುತ್ತಿದೆ.

ಅಲ್ಲಿನ ಆರ್ಥಿಕತೆಯು ಅತ್ಯಂತ ಕೆಟ್ಟ ಹಂತ ತಲುಪಿದೆ.ಸೈನಿಕರಿಗೆಎರಡು ಹೊತ್ತಿನ ಊಟವನ್ನು  ನೀಡಲು ಪರದಾಡುವ ಸ್ಥಿತಿ, ಇನ್ನೂ ಯುವ ಜನರ ಪಾಡು ಹೇಳತೀರದು   ನಿರುದ್ಯೋಗ ಸ್ಥಿತಿ ಆಧೋಗತಿಗೆ ಇಳಿದಿದೆ ಅಲ್ಲದೇ ದೇಶದ ಉದ್ದಗಲಕ್ಕೂ ತಾನೇ  ಸಾಕಿ ಬೆಳಸಿ ಪೋಷಿಸಿದಂತಹ  ತೆಹ್ರಿಕ್ – ಇ – ತಾಲೀಬಾನ್ ನಂತಹ   ಸಂಘಟನೆಯು ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಹೀಗಾಗಿ, ಪಾಕಿಸ್ತಾನಕ್ಕೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಯಾವ ಸ್ಥಿತಿಗೆ ತಲುಪಿದೆ ಎಂದರೆ ದೇಶದ ಜನರ ಆರೋಗ್ಯ ಸಂಬಂಧಿಸಿದ ಕಾಯಿಲೆಗಳಾದ ಹೃದಯ, ಕಿಡ್ನಿ ಮತ್ತು ಕ್ಯಾನ್ಸರ್ನಂತರ ಸೂಕ್ಷ್ಮ ಕಾಯಿಲೆ, ಔಷಧೀಯ ವಸ್ತುಗಳು,ಮತ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಬೇಕಾದ ಅರಿವಳಿಕೆ ಚುಚ್ಚುಮದ್ದುಗಳು ಕೇವಲ 2 ವಾರಕ್ಕಾಗುವಷ್ಟು ಮಾತ್ರ ಉಳಿದಿದೆ. ಶಸ್ತ್ರಚಿಕಿತ್ಸೆಗಳನ್ನು ಮಾಡದಂತೆ  ಸರ್ಕಾರವೇ ವೈದ್ಯರಿಗೆ ಸೂಚನೆ ನೀಡಿದೆ.

ಔಷಧ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಭಾರತ ಮತ್ತು ಚೀನಾ ಸೇರಿ ಕೆಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಇದಕ್ಕೆ ಬೇಕಾದ ಹಣ ಈಗ ದೇಶದ ಬಳಿ ಇಲ್ಲದಿರುವುದರಿಂದ ಇವುಗಳಿಗೆಲ್ಲಾ ತಡೆ ಬಿದ್ದಿದೆ.  ಜಗತ್ತಿನ ಎಲ್ಲಾ ದೇಶದ ಮುಂದೆ ಕೈಚಾಚಿ ನಿಂತಿರುವ  ಪಾಕ್ ನ ಪ್ರಧಾನಿ ಸಂದರ್ಶನವೊಂದರಲ್ಲಿ ಹೇಳುತ್ತಾರೆ “ನಾವು ಭಾರತದೊಂದಿಗೆ ಮೂರು ಯುದ್ಧಗಳನ್ನು ಮಾಡಿದ್ದೇವೆ,, ಅವರು ಅಭಿವೃದ್ಧಿ ಕಡೆಗೆ ಮುಖ ಮಾಡಿದರೆ , ನಾವು   ಜನರಿಗೆ ನೀಡಿದ್ದು ಹೆಚ್ಚು ದುಃಖ, ಬಡತನ ಮತ್ತು ನಿರುದ್ಯೋಗವನ್ನು ತಂದಿದ್ದೇವೆ. ಈಗ ನಾವು ಅದರಿಂದ ಪಾಠ ಕಲಿತಿದ್ದೇವೆ ಮತ್ತು ನಾವು ಶಾಂತಿಯಿಂದ ಬದುಕಲು ಬಯಸುತ್ತೇವೆ, ನಮ್ಮ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದರೆ, ”ಎಂದು ಹೇಳುತ್ತಾ ಭಾರತದಡೆಗೆ ಆಸೆಗಣ್ಣಿನಿಂದ ನೋಡುತ್ತಿದ್ದಾರೆ ಸಹಾಯಕ್ಕಾಗಿ.

ಭಾರತದ ಒಡಲಿನಿಂದ ಬೇರ್ಪಟ್ಟು ಹುಟ್ಟಿದ ಪಾಕಿಸ್ತಾನ, ನಮಗಿಂತ ಒಂದು ದಿನ ಮುಂಚೆಯೇ ಸ್ವಾತಂತ್ರ್ಯ ಕಂಡಂಥ ರಾಷ್ಟ್ರ. ಪಾಕ್ ಹೊಸ ರಾಷ್ಟ್ರವಾಗಿ ಹುಟ್ಟುವ ಹೊತ್ತಿಗೆ ತನ್ನ ಅನುಕೂಲಕ್ಕೆ ಏನು ಬೇಕೋ ಎಲ್ಲವನ್ನೂ ಭಾರತದಿಂದ ಪಡೆದಿದೆ. ಬಹುಸಂಖ್ಯಾತ ಪ್ರಜೆಗಳಾಗಿ ಮುಸ್ಲಿಮರನ್ನು ಬಯಸಿದಾಗ, ಭಾರತ ದಯಪಾಲಿಸಿತ್ತು. ಮೂಲಸೌಕರ್ಯಕ್ಕೆ ಒಂದಿಷ್ಟು ಅನುದಾನ ಕೇಳಿದಾಗ, ಕೋಟ್ಯಂತರ ಲೆಕ್ಕದಲ್ಲಿ ಭಾರತ ಕೈಗಿಟ್ಟಿತ್ತು. ಅಖಂಡ ಭಾರತದ ಅತ್ಯಂತ ಫಲವತ್ತಾದ ಭೂಮಿ ಸಿಂಧು, ಸಟ್ಲೇಜ್, ಚೆನಾಬ್ ನದಿ ತೀರದ ಪ್ರದೇಶಗಳು ಪಾಕಿಸ್ತಾನಕ್ಕೇ ಸೇರಿದವು. ಸೇನೆಯಲ್ಲೂ ಪಾಲು ಪಡೆದು, ರಾಯಲ್ ಇಂಡಿಯನ್ ಏರ್ಫೋರ್ಸ್ನ ಬಹುಪಾಲು ಯುದ್ಧ ವಿಮಾನಗಳನ್ನು ಪಾಕ್ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

ಸ್ವಾತಂತ್ರ್ಯ ಸಿಗುವ ಹೊತ್ತಿಗೆ 34 ಕೋಟಿ ಜನಸಂಖ್ಯೆಯನ್ನು ಸಲುಹುವ ಹೊಣೆ ಭಾರತದ ಹೆಗಲಿಗೆ ಬಿದ್ದರೆ, ಪಾಕಿಸ್ತಾನಕ್ಕೆ 7 ಕೋಟಿ ಜನರ ನಿರ್ವಹಣೆಯ ಸುಲಭದ ಸವಾಲಿತ್ತು. ಅಂದು ಭಾರತಕ್ಕಿಂತ ತಲಾ ಆದಾಯದಲ್ಲಿ ಮುಂದೆ ಇದ್ದ ಪಾಕಿಸ್ತಾನದ ಸ್ಥಿತಿ ಇಂದು ಬೇರೆಯೇ ಇದೆ. ಅಲ್ಲೀಗ ವಿದೇಶಿ ವಿನಿಮಯ ಸಂಗ್ರಹ ಖಾಲಿ ಆಗುವ ಹಂತದಲ್ಲಿದೆ. ಆಹಾರದ ಕ್ಷಾಮ ಉಂಟಾಗಿ ಜನರ ತಟ್ಟೆಯಿಂದ ರೊಟ್ಟಿ ಕಣ್ಮರೆಯಾಗುವಂಥ ದುಸ್ಥಿತಿ ಒದಗಿದೆ. ಆರೇಳು ದಶಕಗಳ ಹಿಂದೆ ಭಾರತಕ್ಕಿಂತ ಸುಖವಾಗಿದ್ದ ರಾಷ್ಟ್ರ ಇಂದು ದಯನೀಯ ಸ್ಥಿತಿಯಲ್ಲಿದೆ.

1960ರವರೆಗೂ ಪಾಕ್ ನ ಆರ್ಥಿಕ ಸ್ಥಿತಿ ಭಾರತಕ್ಕಿಂತ ಉತ್ತಮವಾಗಿತ್ತು. ವಿಶ್ವಬ್ಯಾಂಕ್ ನ ಅಂಕಿ-ಅಂಶದ ಪ್ರಕಾರ, 1960ರಲ್ಲಿಪಾಕಿಸ್ತಾನದ ತಲಾ ಆದಾಯವು 6,797 ರೂ. ಇದ್ದರೆ, ಆ ಹೊತ್ತಿಗೆ ಭಾರತೀಯರ ತಲಾ ಆದಾಯ 6,708 ರೂ.! ಅಂದರೆ ಭಾರತಕ್ಕಿಂತ 89 ರೂ. ಅಧಿಕ ತಲಾ ಆದಾಯವನ್ನು ಪಾಕ್ ಹೊಂದಿತ್ತು. ಆದರೆ, 2022ರ ವೇಳೆಗೆ ಉಭಯ ದೇಶಗಳ ತಲಾ ಆದಾಯದ ಚಿತ್ರಣವೇ ಬದಲಾಗಿದೆ. ಪ್ರಸ್ತುತ ಭಾರತದ ತಲಾ ಆದಾಯ 1,97,552 ರೂ.ಗಳಿದ್ದರೆ, ಪಾಕ್ ನ ತಲಾ ಆದಾಯವು 1,24,627 ರೂ.ಗಳಷ್ಟಿದೆ

ಹಸಿವಿನ ಅಂಚಿಗೆ  : ರಾಜಕೀಯ ಅನಿಶ್ಚಿತತೆ, ಚೀನಾದ ಸಾಲದ ಪಾಶ, ನಿಯಂತ್ರಣಕ್ಕೆ ಸಿಗದ ಹಣದುಬ್ಬರದಿಂದ ಪಾಕಿಸ್ತಾನ ಸಾಲದ ಸುಳಿಗೆ ಸಿಲುಕಿದೆ. ಪ್ರಧಾನಿ ಶೆಹಾಬಾಜ್ ಷರೀಫ್ ಸರ್ಕಾರ ಎಷ್ಟೇ ತಿನುಕಾಡಿದರೂ ಪರಿಸ್ಥಿತಿ ಹತೋಟಿಗೆ ಸಿಗುತ್ತಿಲ್ಲ. ಬೆಲೆ ಏರಿಕೆ ಬಿಸಿ, ಅಲ್ಲಿನ ಜನರನ್ನ ಬೀದಿಗೆ ಬರುವಂತೆ ಮಾಡಿದೆ.

ಪಾಕಿಸ್ತಾನದಲ್ಲಿ ಲೀಟರ್ ಹಾಲಿದ ದರ 200ರ ಗಡಿ ದಾಟಿದೆ. ಕೆಲ ಅಂಗಡಿಯಲ್ಲಿ ಲೀಟರ್ ಲೂಸ್ ಹಾಲಿನ ದರ 190 ರೂಪಾಯಿ ಇತ್ತು. 1 ಲೀಟರ್​ ಪಾಕೆಟ್ ಹಾಲಿನ ದರಕ್ಕೆ ಸುಮಾರು 210 ಇದೆ. ಈ ತಿಂಗಳ ಆರಂಭದಲ್ಲಿ, ಜೀವಂತ ಕೋಳಿ ಕೆಜಿಗೆ 390-440 ಇತ್ತು. ಅತ್ತ ಕೋಳಿ ಮಾಂಸವು ಈಗ ಕೆಜಿಗೆ 700-780 ರೂ.ಗೆ ಮಾರಾಟವಾಗ್ತಿದೆ. ಕೆಲ ದಿನಗಳ ಹಿಂದೆ ಕೆಜಿ ಚಿಕನ್​​ ಬೆಲೆ 620-650 ರೂ ಆಗಿತ್ತು. ಮತ್ತೊಂದ್ಕಡೆ ಮೂಳೆಗಳಿಲ್ಲದ ಮಾಂಸದ ಬೆಲೆ ಕೆಜಿಗೆ 1,000-1,100 ರೂಪಾಯಿಗೆ ಏರಿಕೆಯಾಗಿದೆ.

ಪ್ರಪಂಚದಲ್ಲಿ ಹೆಚ್ಚು ನೀರಾವರಿ ಮತ್ತು ಫಲವತ್ತಾದ ಗೋಧಿ ಬೆಳೆಯುವ ಭೂಮಿ ಹೊಂದಿರುವ ದೇಶವು ಗೋಧಿ ಹಿಟ್ಟಿನ ಕೊರತೆಯಿಂದ ಬಳಲುತ್ತಿದೆ. ಇದಲ್ಲದೆ ಗೋಧಿ ಆಮದು ಮಾಡಿಕೊಳ್ಳಲು ಹಣವಿಲ್ಲದಂತಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 249.80 ಆಗಿದ್ರೆ, ಡೀಸೆಲ್ ಲೀಟರ್ಗೆ 262.80 ಏರಿಕೆಯಾಗಿದೆ. ಟೀ ಕುಡಿಯೋದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ. ಕಾರಣ ಲೀಟರ್ ಹಾಲಿದ ದರ ಮತ್ತು ದುಬಾರಿಯಾಗಿದೆ.

ವಿಶ್ವ ಆರ್ಥಿಕ ವೇದಿಕೆ ವರದಿ ಬಿಡುಗಡೆ ಪ್ರಕಾರ ಪಾಕಿಸ್ತಾನವು ಹಸಿವಿನ ದೊಡ್ಡ ಅಪಾಯವನ್ನು ಎದುರಿಸುತ್ತಿದೆ. ನೈಸರ್ಗಿಕ ವಿಕೋಪಗಳು ಮತ್ತು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಇನ್ನಷ್ಟು ಈ ಅಪಾಯವು ಹೆಚ್ಚಾಗಬಹುದು ಎಂದು ಎಚ್ಚರಿಸಿದೆ. ಜಿಯೋ ನ್ಯೂಸ್ ವರದಿಯ ಪ್ರಕಾರ, ಹವಾಮಾನ ಸಂಬಂಧಿತ ನೈಸರ್ಗಿಕ ವಿಕೋಪ ಮತ್ತು ಪಾಕಿಸ್ತಾನದ ಅಸ್ತವ್ಯಸ್ತಗೊಂಡ ಪೂರೈಕೆ ಸಂಯೋಜನೆಯಿಂದಾಗಿ ಇಂಥ ಸನ್ನಿವೇಶದಲ್ಲಿ ಪ್ರಸ್ತುತ ಲಕ್ಷಾಂತರ ಜನರ ಹಸಿವಿನ ಬಿಕ್ಕಟ್ಟು ವಿನಾಶಕಾರಿ ಘಟ್ಟಕ್ಕೆ ತಲುಪಬಹುದು. ಕುಸಿಯುತ್ತಿರುವ ರೂಪಾಯಿ ಮೌಲ್ಯ ಮತ್ತು ಇನ್ನೊಂದು ಕಡೆ ಏರುತ್ತಿರುವ ಹಣದುಬ್ಬರವು ಮತ್ತಷ್ಟು ಜನರ ಹಸಿವಿನ ಅಪಾಯವನ್ನು ಹೆಚ್ಚಿಸಲಿದೆ.

ಎಲ್ಲದರ ಪರಿಣಾಮವಾಗಿ 90 ಲಕ್ಷಕ್ಕೂ ಹೆಚ್ಚು ಜನರು ಬಡತನಕ್ಕೆ ತಳ್ಳಲ್ಪಡಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

 ಸ್ವಾತಂತ್ರ್ಯದ ಸಮಯದಲ್ಲಿ ಭಾರತಕ್ಕಿಂತಲೂ ಪಾಕಿಸ್ತಾನದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಆದರೆ ಕಳೆದ 75 ವರ್ಷಗಳಲ್ಲಿ ಪಾಕಿಸ್ತಾನದ ಆರ್ಥಿಕತೆ ಅಧೋಗತಿಗೆ ಬಂದಿದೆ.

ಸಾಲವೇ ನಮ್ಮ ದೇವರು:  ಸಾಲವು ಪಾಕಿಸ್ತಾನದ ಅತ್ಯಂತ ದೊಡ್ಡ ಆರ್ಥಿಕ ಸಮಸ್ಯೆಗಳಲ್ಲಿ ಒಂದು. ಹೊರದೇಶಗಳ ಹಣಕಾಸಿನ ನೆರವಿನ ಮೇಲೆ ಅವಲಂಬನೆಯಾಗದೇ, ದೇಶೀಯವಾಗಿ ಆದಾಯ ಕ್ರೋಡೀಕರಿಸಬೇಕಾದ ಅಗತ್ಯವಿದೆ ಎನ್ನುವ ಪ್ರಧಾನಿ ಶಹಬಾಜ್ ಷರೀಫ್ ,ಅವರು ಹೇಳಿದ ರೀತಿಯಲ್ಲಿ ವಾಸ್ತವ ಸ್ಥಿತಿಯಲ್ಲಿ ಪಾಕಿಸ್ತಾನ ಇಲ್ಲ, ದೇಶದ ವಾಣಿಜ್ಯ ಬ್ಯಾಂಕ್ಗಳು ನೀಡಿರುವ ಒಟ್ಟು ಸಾಲದಲ್ಲಿ ಸರ್ಕಾರ ಪಡೆದಿರುವ ಸಾಲದ ಪ್ರಮಾಣ ಶೇ 63ಕ್ಕಿಂತಲೂ ಹೆಚ್ಚು.

ತೆರಿಗೆ ಮೂಲದ ಆದಾಯ ಖೋತಾ ಮತ್ತು ಸಹಾಯಧನದ ಪರಿಣಾಮ ಬಜೆಟ್ ನ ವಿತ್ತೀಯ ಕೊರತೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಕೊರತೆಯನ್ನು ನೀಗಿಸಲು ಸರ್ಕಾರವು ದೇಶದ ವಾಣಿಜ್ಯ ಬ್ಯಾಂಕ್ ಗಳಿಂದ ಹೆಚ್ಚು ಸಾಲ ಪಡೆದಿದೆ. ಹೆಚ್ಚು ಉದ್ಯೋಗ ಸೃಷ್ಟಿಸುವ ತಯಾರಿಕೆ ಮತ್ತು ಸೇವಾ ವಲಯಕ್ಕೆ ಅಗತ್ಯವಿರುವ ಸಾಲ ಲಭ್ಯವಿಲ್ಲ. ಹೀಗಾಗಿ ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದು ಸಹ ದೇಶದ ಆರ್ಥಿಕತೆಯನ್ನು ಕುಂಠಿತಗೊಳಿಸಿದೆ. ಈ ಕಾರಣದಿಂದ ಜನರ ಬಳಿ ಹಣ ಇಲ್ಲದೇ ಇರುವ ಸ್ಥಿತಿ ಉಂಟಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. 

ಅತ್ಯಂತ ಕಡಿಮೆ ಪ್ರಮಾಣದ ಆರ್ಥಿಕ ಪ್ರಗತಿ, ಅತಿಯಾದ ಹಣದುಬ್ಬರ ದೇಶವು ಇನ್ನಷ್ಟು ಕಂಗೆಡುವಂತೆ ಮಾಡಿದೆ. ಇದೇ ಜೂನ್ ಗೆ ಕೊನೆಯಾಗಲಿರುವ ಆರ್ಥಿಕ ವರ್ಷದಲ್ಲಿ ದೇಶದ ಪ್ರಗತಿಯು ಶೇ 2ರಷ್ಟು ಮಾತ್ರ ಇರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಕೂಡ ಒಟ್ಟು ಆಂತರಿಕ ಉತ್ಪನ್ನದ ಪ್ರಗತಿಯು ಶೇ 3.2ರಷ್ಟು ಮಾತ್ರ ಇರಲಿದೆ ಎಂದೂ ವಿಶ್ವ ಬ್ಯಾಂಕ್ ಅಂದಾಜಿಸಿದೆ.

ಹಾಗಾಗಿ, ದೇಶದ ಆರ್ಥಿಕ ಚೇತರಿಕೆಯು ತಕ್ಷಣಕ್ಕೆ ಸಾಧ್ಯವಿಲ್ಲ. ಹಣದುಬ್ಬರವು ಜನರ ಬದುಕನ್ನು ಹೈರಾಣಾಗಿಸಿದೆ. 2022ರ ಡಿಸೆಂಬರ್ ನಲ್ಲಿ ಹಣದುಬ್ಬರವು ಶೇ 24.5ರಷ್ಟು ಇತ್ತು ಎಂದು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹೇಳಿದೆ (2021ರ ಡಿಸೆಂಬರ್ ನಲ್ಲಿ ಹಣದುಬ್ಬರವು ಶೇ 12.3ರಷ್ಟಿತ್ತು). ನಗರಗಳಲ್ಲಿ ಆಹಾರ ಹಣದುಬ್ಬರವು ಶೇ 32.7ರಷ್ಟಕ್ಕೆ ತಲುಪಿದೆ.

ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನವು ಇನ್ನಿಲ್ಲದ ಯತ್ನ ನಡೆಸುತ್ತಿದೆ. ಹಣಕಾಸಿನ ನೆರವು ನೀಡುವಂತೆ ಎಲ್ಲ ದೇಶಗಳ ಮುಂದೆ ಪದೇಪದೇ ಬೇಡಿಕೆ ಇಡುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎದುರು ಪಾಕಿಸ್ತಾನ 23 ಬಾರಿ ಮನವಿ ಮಾಡಿದೆ ಎನ್ನಲಾಗಿದೆ. ಆದರೆ, ಷರತ್ತುಗಳನ್ನು ಈಡೇರಿಸದ ಹೊರತು ಹಣಕಾಸು ನೆರವು ಇಲ್ಲ ಎಂದು ಐಎಂಎಫ್ ಸ್ಪಷ್ಟಪಡಿಸಿದೆ. ಐಎಂಎಫ್ ಷರತ್ತುಗಳನ್ನು ಪೂರೈಸಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ.

ಪ್ರವಾಹ ಹಾಗೂ ಆ ಬಳಿಕ ಉಂಟಾಗಿರುವ ಆರ್ಥಿಕ ಸಮಸ್ಯೆ ನಿವಾರಣೆಗಾಗಿ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಸಮುದಾಯದಿಂದ 73 ಸಾವಿರ ಕೋಟಿ (900 ಕೋಟಿ ಡಾಲರ್) ಹಣಕಾಸಿನ ನೆರವಿನ ಭರವಸೆ ಸಿಕ್ಕಿದೆ. ಇಸ್ಲಾಮಿಕ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ 35,000 ಕೋಟಿ (420 ಕೋಟಿ ಡಾಲರ್) ವಿಶ್ವ ಬ್ಯಾಂಕ್ ನಿಂದ 16,400 ಕೋಟಿ (200 ಕೋಟಿ ಡಾಲರ್), ಸೌದಿ ಅರೇಬಿಯಾದಿಂದ 8200 ಕೋಟಿ (100 ಕೋಟಿ ಡಾಲರ್) ಐರೋಪ್ಯ ಒಕ್ಕೂಟದಿಂದ 760 ಕೋಟಿ (9.3 ಕೋಟಿ ಡಾಲರ್), ಅಮೆರಿಕದಿಂದ 7,300 ಕೋಟಿ (90 ಕೋಟಿ ಡಾಲರ್) ಜರ್ಮನಿಯಿಂದ 720 ಕೋಟಿ (8.8 ಕೋಟಿ ಡಾಲರ್) ಚೀನಾದಿಂದ 820 ಕೋಟಿ (10 ಕೋಟಿ ಡಾಲರ್) ನೆರವಿನ ಭರವಸೆ ಸಿಕ್ಕಿರುವುದು ಪಾಕಿಸ್ತಾನಕ್ಕೆ ಕೊಂಚ ಸಮಾಧಾನ ತಂದಿದೆ.

ಆದರೆ, ಪಾಕಿಸ್ತಾನದ ಅತ್ಯಂತ ಆಪ್ತ ದೇಶಗಳಲ್ಲಿ ಗುರುತಿಸಿಕೊಂಡಿರುವ ಚೀನಾ, ದೊಡ್ಡ ಮಟ್ಟದ ಸಹಾಯಕ್ಕೆ ಮುಂದಾಗಿಲ್ಲ ಎಂದು ಹೇಳಲಾಗಿದೆ. ಸೌದಿ ಅರೇಬಿಯಾವು ಪಾಕಿಸ್ತಾನಕ್ಕೆ ಈಗಾಗಲೇ ನೀಡಿರುವ 200 ಕೋಟಿ ಡಾಲರ್ ಸಾಲದ ಜೊತೆಗೆ ಮತ್ತೆ 100 ಕೋಟಿ ಡಾಲರ್ ಸಾಲ ನೀಡಲು ಮುಂದಾಗಿದೆ. ಕತಾರ್ ಮೊದಲಾದ ಇಸ್ಲಾಮಿಕ್ ದೇಶಗಳು ಸಹಾಯದ ಭರವಸೆ ನೀಡಿವೆ.

 ಪ್ರವಾಹ ಹಾಗೂ ಅದರ ಬಳಿಕ ಉಂಟಾಗಿರುವ ಆರ್ಥಿಕ ಏರುಪೇರು ಸರಿಪಡಿಸಲು ಸುಮಾರು 1.3 ಲಕ್ಷ ಕೋಟಿ (1630 ಕೋಟಿ ಡಾಲರ್) ಅಗತ್ಯವಿದೆ ಎಂದು ಪಾಕಿಸ್ತಾನ ಅಂದಾಜಿಸಿತ್ತು. ಈ ಪೈಕಿ ಅರ್ಧದಷ್ಟು ಹಣಕಾಸು ಹೊಂದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ತಕ್ಷಣಕ್ಕೆ ಪಾಕಿಸ್ತಾನಕ್ಕೆ ಎಷ್ಟು ನೆರವು ಸಿಗಲಿದೆ ಹಾಗೂ ಮರುಪಾವತಿ ಹೇಗೆ ಎಂಬುದನ್ನು ದೇವರೇ ಬಲ್ಲ

ಡಾಲರ್ ಎದುರು ಕುಸಿದ ಪಾಕಿಸ್ತಾನಿ ರೂಪಾಯಿ:  ಪಾಕಿಸ್ತಾನದ ಆರ್ಥಿಕ ದುಃಸ್ಥಿತಿ ಇನ್ನು ಯಾರಿಂದಲೂ ನಿವಾರಣೆಯಾಗಿಲ್ಲ. ಜನವರಿ 2022ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ ವಿದೇಶಿ ವಿನಿಮಯ ಸಂಗ್ರಹವು $16.6 ಬಿಲಿಯನ್ ಇದ್ದಿತ್ತು. ಈಗ ಅದು 5.576 ಶತಕೋಟಿ ಡಾಲರ್ ಗೆ ಕುಸಿದಿದೆ.

ವಿಶ್ಲೇಷಕರ ಮಾಹಿತಿ ಪ್ರಕಾರ, ಪ್ರಸ್ತುತ ವಿದೇಶಿ ವಿನಿಮಯ ಸಂಗ್ರಹದ ಅನ್ವಯ ಪಾಕಿಸ್ತಾನವು ಮೂರು ವಾರಗಳವರೆಗೆ ಮಾತ್ರ ಆಮದು ಮಾಡಿಕೊಳ್ಳಬಹುದು. ಇದಷ್ಟೇ ಅಲ್ಲದೇ ಡಾಲರ್ ಎದುರು ಪಾಕಿಸ್ತಾನದ ಕರೆನ್ಸಿ ಕೂಡ ದುರ್ಬಲವಾಗಿ ಮಂಡಿಯೂರಿದೆ. ಡಾಲರ್ ಬೆಲೆ 227.8 ಪಾಕಿಸ್ತಾನಿ ರೂಪಾಯಿಗೆ ಸಮನಾಗಿದೆ. ಕಳೆದ ಮೂರು ತಿಂಗಳಲ್ಲಿ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ 10 ರೂಪಾಯಿ ಇಳಿಕೆಯಾಗಿದೆ. ಆಹಾರ ಹಣದುಬ್ಬರವು ಸಹ ವರ್ಷದಿಂದ ವರ್ಷಕ್ಕೆ 35.5 ಪ್ರತಿಶತದಷ್ಟು ಹೆಚ್ಚಳವಾಗಿದೆ.

ರಾಜಕೀಯ ಬಿಕ್ಕಟ್ಟು: ನಿರಂತರ ರಾಜಕೀಯ ಅಸ್ಥಿರತೆ ,ಸೇನಾ ಆಡಳಿತ ,ಭ್ರಷ್ಟಾಚಾರ ದಿಂದ ಪಾಕ್ ನ ಯಾವ ಪ್ರಧಾನಿಯು ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ಇಲ್ಲಿ ಇನ್ನೊಂದು ಗಮನಾರ್ಹವಾದ ಅಂಶವಾಗಿದೆ.

2022ರಲ್ಲಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಶೆಹಬಾಜ್ ಷರೀಫ್ ಅಧಿಕಾರ ವಹಿಸಿಕೊಂಡರು. ಈಗ ಷರೀಫ್ ಸರಕಾರವನ್ನು ಉರುಳಿಸಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ.

ಆಗಿನ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನಲ್ಲಿ ಅವಿಶ್ವಾಸ ಮತವನ್ನು ಎದುರಿಸಬೇಕಾಯಿತು. ವಿಶ್ವಾಸ ಮತದ ಮೊದಲು, ಇಮ್ರಾನ್ ಖಾನ್ ಅವರು, ವಿರೋಧ ಪಕ್ಷಗಳು ಅಮೆರಿಕ ಮತ್ತು ಪಾಕಿಸ್ತಾನದ ಸೇನೆಯ ಪ್ರಚೋದನೆಯ ಮೇಲೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದರು. ಅಂದಿನಿಂದ, ಇಮ್ರಾನ್ ಖಾನ್ ಅವರು, ನಿರಂತರವಾಗಿ ಚುನಾವಣೆಗೆ ಒತ್ತಾಯಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರ ನಿರಂತರ ಪ್ರಚಾರ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿ ಅನೇಕ ರ‍್ಯಾಲಿಗಳು ಸಹ ನಡೆದವು. ಮತ್ತೊಂದೆಡೆ, ಶೆಹಬಾಜ್ ಷರೀಫ್ ಪಾಕಿಸ್ತಾನದಲ್ಲಿ ಹಣದುಬ್ಬರವನ್ನು ತೊಡೆದುಹಾಕಲು ವಿಫಲರಾಗಿದ್ದಾರೆ. ಆದಷ್ಟು ಬೇಗ ಚುನಾವಣೆ ನಡೆಸುವಂತೆ ಅವರ ಮೇಲೆ ಒತ್ತಡವೂ ಹೆಚ್ಚುತ್ತಿದೆ.

ರಾಜಕೀಯ ಗೊಂದಲಗಳು ಪಾಕ್  ನ ಭವಿಷ್ಯಕ್ಕೂ ಸವಾಲನ್ನುಂಟು ಮಾಡಿದೆ. ಪ್ರಸ್ತುತ ಸರ್ಕಾರದ ಅಧಿಕಾರಾವಧಿಯು ಆಗಸ್ಟ್ ನಲ್ಲಿ ಕೊನೆಗೊಳ್ಳಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ವಿಶೇಷ ಉಸ್ತುವಾರಿ ಸರ್ಕಾರವು 90 ದಿನಗಳವರೆಗೆ ಅಧಿಕಾರ ವಹಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಒಂದು ವೇಳೆ ಮತ್ತೆ ಸೇನಾ ಆಡಳಿತ ಬಂದರು ಬರಬಹುದು.

ಕಳೆದ ಆಗಸ್ಟ್ ಅಂತ್ಯದಲ್ಲಿ ಪಾಕಿಸ್ತಾನದಲ್ಲಿ ಉಂಟಾದ ದೊಡ್ಡ ಪ್ರವಾಹ 1,500ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು. ಅಲ್ಲದೆ, ಶತಕೋಟಿ ಡಾಲರ್ ಮೌಲ್ಯದ ಹಾನಿಯನ್ನು ಉಂಟುಮಾಡಿತು. ಇದು ಪಾಕ್ ಆರ್ಥಿಕತೆಯ ಮೇಲೆ ಇನ್ನಷ್ಟು ಒತ್ತಡವನ್ನು ಉಂಟುಮಾಡಿತು.

ಆರ್ಥಿಕ ವರ್ಷ 23 ರಲ್ಲಿ ಪಾಕ್ ನ ಆರ್ಥಿಕತೆಯು ಕೋವಿಡ್-19 ಪರಿಣಾಮಗಳಿಂದ ಚೇತರಿಕೆಯನ್ನು ಪಡೆದುಕೊಂಡರೂ ಮಿತಿಮೀರಿದ ಹೊಂದಾಣಿಕೆಗಳಿಗೆ ಒಳಗಾಗಿತ್ತು ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಪ್ರವಾಹಗಳಿಂದಾಗಿ ಪಾಕ್ ಇನ್ನಷ್ಟು ಕಂಗೆಟ್ಟಿತು ಹಾಗೂ ಅಗತ್ಯವಿರುವ ಆರ್ಥಿಕ ಹೊಂದಾಣಿಕೆಯನ್ನುಕಂಗೆಡಿಸಿರ ಬ ಹು ದು ಎಂಬುದಾಗಿ ವಿಶ್ವ ಬ್ಯಾಂಕ್ ಅಂದಾಜಿಸಿದೆ. ಅದಾಗ್ಯೂ 2023ರ ವರ್ಷದಲ್ಲಿ ಪಾಕ್ ಆರ್ಥಿಕ ಬೆಳವಣಿಗೆಯಲ್ಲಿ 2% ಪ್ರಗತಿಯನ್ನು ಮಾತ್ರ ತಲುಪುತ್ತದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.

ಶಕ್ತಿ ಮತ್ತು ಇಂಧನದ ಗಮನಾರ್ಹ ಕೊರತೆ: ಹೆಚ್ಚು ಆಮದು ಅವಲಂಬಿತ ದೇಶವಾಗಿರುವ ಪಾಕಿಸ್ತಾನವು ಇಂಧನಕ್ಕೆ ಸಂಬಂಧಿಸಿದಂತೆ ಜಾಗತಿಕ ತೈಲ ಹಾಗೂ ಅನಿಲ ಬೆಲೆಗಳ ಹೆಚ್ಚಳವನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಎಂದು ಸಂಶೋಧನೆ ಮತ್ತು ನೀತಿ ಎಂಗೇಜ್ಮೆಂಟ್ ನ ಪ್ರೊಫೆಸರ್ ಮತ್ತು ಅಸೋಸಿಯೇಟ್ ಡೀನ್ ಜಾನ್ ಸಿಯೋರ್ಸಿಯಾರಿ ತಿಳಿಸಿದ್ದಾರೆ.

ಪಾಕ್ ಸಾಕಷ್ಟು ವಿದ್ಯುತ್ ಸಾಮರ್ಥ್ಯವನ್ನು ಹೊಂದಿದ್ದರೂ ತೈಲ ಮತ್ತು ಅನಿಲ-ಚಾಲಿತ ಸ್ಥಾವರಗಳನ್ನು ನಡೆಸಲು ಸಂಪನ್ಮೂಲಗಳ ಕೊರತೆಯಿದೆ ಹಾಗೂ ಸಂಪನ್ಮೂಲಗಳು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿವೆ.

ಹೀಗಾಗಿ ಮೂಲಸೌಕರ್ಯ ಮತ್ತು ವಿದ್ಯುತ್ ಸಂಪನ್ಮೂಲಗಳಲ್ಲಿ ಹೂಡಿಕೆ ಮಾಡುವುದು ಕಷ್ಟದ ಮಾತಾಗಿದೆ ಎಂದು ಐಎಎನ್ಎಸ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟು ಹಾಗೂ ಇಂಧನ ಸಂರಕ್ಷಣೆ ಉದ್ದೇಶಗಳಿಗಾಗಿ ದೇಶದ ಶಾಪಿಂಗ್ ಮಾಲ್ ಗಳು ಹಾಗೂ ಮಾರುಕಟ್ಟೆಗಳನ್ನು ರಾತ್ರಿ 8.30 ರೊಳಗೆ ಮುಚ್ಚಲಾಗುತ್ತಿದೆ ಎಂದು ವರದಿ ತಿಳಿಸಿದೆ.

ದೇಶವು ಕೋವಿಡ್-19 ರ ನಂತರ ಆರ್ಥಿಕ ಚೇತರಿಕೆಯನ್ನು ಪಡೆದುಕೊಳ್ಳಲು ಹೆಣಗಾಡುತ್ತಿದೆ. ವಿದ್ಯುತ್ ಕಡಿತ ಮತ್ತು ದುಬಾರಿ ವಿದ್ಯುತ್, ದೇಶೀಯ ಕೈಗಾರಿಕಾ ಉತ್ಪಾದನೆ ಮತ್ತು ರಫ್ತು ಮಾರುಕಟ್ಟೆಗಳಲ್ಲಿನ ಸ್ಪರ್ಧಾತ್ಮಕತೆಯಿಂದಾಗಿ ಆರ್ಥಿಕ ಸ್ಥಿರತೆ ಕಷ್ಟವಾಗಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಕೆಲವು ವಿದ್ಯುತ್ ಮೂಲಸೌಕರ್ಯಗಳನ್ನು ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPED) ಭಾಗವಾಗಿ ನಿರ್ಮಿಸಲಾಗಿದೆ. ಈ ಮೂಲಸೌಕರ್ಯಗಳು ಪಾಕ್ ನ ಸಾಲಗಳನ್ನು ಇನ್ನಷ್ಟು ಹೆಚ್ಚಿಸಿದೆ, ಏಕೆಂದರೆ ಇವುಗಳ ನಿರ್ವಹಣೆ ದೇಶಕ್ಕೆ ಸಾಧ್ಯವಿಲ್ಲದ ಮಾತಾಗಿದೆ ಎಂಬುದಾಗಿ ವರದಿ ತಿಳಿಸಿದೆ.

ಭಾರತದೊಂದಿಗೆ ಪಾಕಿಸ್ತಾನದ ಉದ್ವಿಗ್ನ ಸಂಬಂಧಗಳು: ಭಾರತ ಮತ್ತು ಪಾಕಿಸ್ತಾನದ ನಡುವಿನ ಒಟ್ಟು ದ್ವಿಪಕ್ಷೀಯ ವ್ಯಾಪಾರವು 2020-2021 ರಲ್ಲಿ $ 329 ಮಿಲಿಯನ್ ಆಗಿತ್ತು. ಈ ಪ್ರಮಾಣವು 2021-2022 ರಲ್ಲಿ $ 514 ಮಿಲಿಯನ್ ಗೆ ಏರಿದೆ. ವಾಣಿಜ್ಯ ಸಚಿವಾಲಯ ಉಲ್ಲೇಖಿಸಿರುವಂತೆ ಭಾರತದ ರಫ್ತು ಪಾಕ್ ನ ಆಮದಿಗಿಂತ ಹೆಚ್ಚಿನ ಪ್ರಮಾಣದಲ್ಲಿವೆ ಎಂದಾಗಿದೆ.

ಪಾಕಿಸ್ತಾನ ಮೇಲೆ ಭಯೋತ್ಪಾದನೆಯ ತವರು ಮನೆ : ದಶಕಗಳಿಂದಲೂ ಉಗ್ರರನ್ನು ಸಾಕಿ ಸಲುಹಿದ ಪಾಕ್ ಈಗ ಅದೇ ಉಗ್ರರಿಂದ ಹಿಂಸಾತ್ಮಕ ಭಯೋತ್ಪಾದನೆ ಎದುರಿಸುತ್ತಿದೆ. ಪೋಲಿಸ್ ಠಾಣೆ, ಮಸೀದಿ, ಶಾಲೆಗಳು ಎನ್ನದೇ ಆತ್ಮಾಹುತಿ ದಾಳಿ ಮಾಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅದರಲ್ಲೂ ತಾನೇ ಪೋಷಿಸಿದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ಉಗ್ರ ಸಂಘಟನೆ  ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ದಾಳಿ ಯನ್ನು ತೀವ್ರಗೊಳಿಸಿದೆ.

ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಈ ಎಲ್ಲ ಕೆಲಸಗಳಿಗೆ ಸಹಾಯ ಮಾಡುತ್ತಿದೆ. ಪಾಕಿಸ್ತಾನಕ್ಕೆ ಈಗ ಭಯೋತ್ಪಾದನೆ ಎದುರಿಸುವುದು ದೊಡ್ಡ ಸವಾಲಾಗಿದೆ. ಟಿಟಿಪಿಗೆ   ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಆಡಳಿತ ಬೇಕು.

ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ಕೊಡುತ್ತಾ ಬಂದಿರೋ ಚೀನಾ ಕೂಡಾ ಸ್ನೇಹಿತನ ನೆರವಿಗೆ ಬಂದಿಲ್ಲ. ಅಲ್ಲದೆ ಅರಬ್ ರಾಷ್ಟ್ರಗಳೂ ಪಾಕಿಸ್ತಾನಕ್ಕೆ ಹಣ ನೀಡಲು ಹಿಂದೆ ಮುಂದೆ ನೋಡ್ತಿವೆ.

ಧರ್ಮದ ಆಧಾರದ ಮೇಲೆ ಹುಟ್ಟಿಕೊಂಡ ಪಾಕಿಸ್ತಾನ, ದಿವಾಳಿ ಆಗ್ಬಿಟ್ಟಿದೆ.  ಭೀಕರ ಹಸಿವು, ಆಂತರಿಕ ಕಲಹದ ನಡುವೆ, ದರ ಏರಿಕೆ  ಬಡ ರಾಷ್ಟ್ರವನ್ನ ಕಂಗೆಡಿಬಿಟ್ಟಿದೆ. ಒಂದೊತ್ತಿನ ಊಟಕ್ಕೂ ಅಲ್ಲಿನ ಜನ ಪರಡಾಡುವಂತಾಗ್ತಿದೆ.

ಸಮರ್ಥ ನಾಯಕತ್ವದ ಕೊರತೆ, ಆಡಳಿತದಲ್ಲಿ ಸೇನಾ ಹಸ್ತಕ್ಷೇಪ,ಭಾರತದ ಬಗೆಗಿನ ದ್ವೇಷ, ಭ್ರಷ್ಟಾಚಾರದ ಕೂಪದಲ್ಲಿ ರಾಜಕಾರಣಿಗಳು, ಜಾಗತಿಕ ಉಗ್ರರಿಗೆ ಆಶ್ರಯ,ಪ್ರೋತ್ಸಾಹದಿಂದ ಜನಸಾಮಾನ್ಯರ ಬದುಕಿಗೆ ಕೊಳ್ಳಿಟ್ಟು ಈಗ ಪಾಕಿಸ್ತಾನ ಜಗತ್ತಿನ ಮುಂದೆ  ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ.