ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಸಂಚು: ಆಪ್‌ ಸಚಿವೆ ಆರೋಪ

ನವದೆಹಲಿ:ಸಿಎಂ ಅರವಿಂದ್‌ ಕೇಜ್ರಿವಾಲ್‌ ರನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜಕೀಯ ಪಿತೂರಿ ನಡೆಸುತ್ತಿದೆ ಜತೆಗೆ ರಾಷ್ಟ್ರಪತಿ ಆಳ್ವಿಕೆ ಹೇರಲು ಯತ್ನಿಸಿದೆ ಎಂದು ದೆಹಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ,ಅವರ ವಿರುದ್ಧ ಅಪರಾಧ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ,ಹಾಗಾಗಿ ಸರ್ಕಾರ ಉರುಳಿಸಲು ಸಂಚು ನಡೆಯುತ್ತಿದೆ ಎಂದು ಆತಂಕ‌ ವ್ಯಕ್ತಪಡಿಸಿದರು.

ಈ ಹಿಂದೆ ನಡೆದ ಕೆಲವು ಬೆಳವಣಿಗೆಗಳನ್ನು ನೋಡಿದಾಗ ಪೂರ್ವನಿಯೋಜಿತವಾಗಿಯೇ ಪ್ಲ್ಯಾನ್‌ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿದೆ ಎಂದು ಅತಿಶಿ ಗಂಭೀರ ಆರೋಪ ಮಾಡಿದರು.

ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಂಚನ್ನು‌ ಬಿಜೆಪಿ ರೂಪಿಸುತ್ತಿದೆ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತಿದೆ,ಆ ಬಗ್ಗೆ ಸೂಚನೆಗಳು ನಮಗೆ ಸಿಕ್ಕಿವೆ ಎಂದು ಆತಿಶಿ ತಿಳಿಸಿದರು.

ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ದೆಹಲಿಯಲ್ಲಿ ಯಾವುದೇ ಅಧಿಕಾರಿಯ ನೇಮಕಾತಿ, ವರ್ಗಾವಣೆ ಆಗಿಲ್ಲ, ಅಧಿಕಾರಿಗಳು ಸರ್ಕಾರದ ಸಭೆಗಳಿಗೆ ಬರುತ್ತಿಲ್ಲ, ಕಳೆದ ವಾರ, ಲೆಫ್ಟಿನೆಂಟ್ ಗವರ್ನರ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಆಧಾರರಹಿತ ಪತ್ರ ಬರೆದು, ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯನ್ನೂ ವಜಾ ಮಾಡಿಸಿದ್ದಾರೆ. ಇವೆಲ್ಲವೂ ದೆಹಲಿ ಸರ್ಕಾರವನ್ನು ಮುಗಿಸಲು ಮಾಡಿರುವ ಸಂಚು ಎಂದು ಸಚಿವೆ ಆರೋಪಿಸಿದರು.ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರುವುದು ಕಾನೂನು ಬಾಹಿರ, ಅಸಾಂವಿಧಾನಿಕ ಮತ್ತು ಜನರ ತೀರ್ಪಿಗೆ ವಿರುದ್ಧವಾದದ್ದು ಎಂಬುದನ್ನು ಬಿಜೆಪಿ ತಿಳಿಯಲಿ ಎಂದು ಎಚ್ಚರಿಸಿದರು.