ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಿದ್ದತೆ ಪೂರ್ಣ: ಡಿಸಿ ಡಾ.ಕೆ ವಿ ರಾಜೇಂದ್ರ

ಮೈಸೂರು: ರಾಜ್ಯದಲ್ಲಿ ಮೊದಲ ಹಂತದ ಮತದಾನ ಏ.26ರಂದು ನಡೆಯಲಿದ್ದು, ಮೈಸೂರು-ಕೊಡಗು ಕ್ಷೇತ್ರದ ಮತಗಟ್ಟೆಗಳು, ಮತದಾರರು, ಭದ್ರತೆ ಸಿದ್ದತೆ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಲೋಕಸಭಾ ಚುನಾವಣೆಗೆ ಸಿದ್ದತೆ ಕುರಿತು  ಡಾ ಕೆ. ವಿ ರಾಜೇಂದ್ರ ಅವರು ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.

ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಉಪಸ್ಥಿತರಿದ್ದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2092222. ಈ ಪೈಕಿ ಪುರುಷರು 1026324,  ಮಹಿಳೆಯರು 1065714, ಇತರರು 184 ಮಂದಿ ಇದ್ದಾರೆ. ಕ್ಷೇತ್ರದಲ್ಲಿ  ಒಟ್ಟು 2202 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು 9809 ಮತಗಟ್ಟೆ ಸಿಬ್ಬಂದಿಗಳನ್ನ ನೇಮಕ ಮಾಡಲಾಗಿದೆ‌ ಎಂದು ಹೇಳಿದರು.

ಏಪ್ರಿಲ್ 26ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶವಿದೆ, 473 ಕೆ ಎಸ್ ಆರ್ ಟಿ ಸಿ ಬಸ್ ಗಳು, 33 ಜೀಪ್ ಗಳು, 79 ಮಿನಿ ಬಸ್ ಗಳನ್ನ ಬಳಕೆ ಮಾಡಲಾಗುತ್ತಿದೆ ಎಂದು ಡಾ.ಕೆ‌.ವಿ ರಾಜೇಂದ್ರ ತಿಳಿಸಿದರು.

ಎಲ್ಲಾ ಮತಗಟ್ಟೆಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದ್ದು,435 ಕ್ರಿಟಿಕಲ್ ಮತಗಟ್ಟೆಗಳನ್ನಜ ಗುರುತು ಮಾಡಲಾಗಿದೆ ಎಂದು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಮೈಸೂರು ಜಿಲ್ಲೆಯಲ್ಲಿ ಒಟ್ಟು 105 ಎಫ್ಐಆರ್ ಗಳನ್ನ ದಾಖಲು ಮಾಡಲಾಗಿದೆ.  ಈ ಪೈಕಿ ಚುನಾವಣಾ ವೆಚ್ಚ ಸಂಬಂಧ 2 ಎಫ್ಐಆರ್ ,ಅಬಕಾರಿ ಕಾಯ್ದೆ ಉಲ್ಲಂಘನೆಯಡಿ 103 ಎಫ್ಐಆರ್ ಗಳು ದಾಖಲಾಗಿದೆ.

ಒಟ್ಟು 2,14,76,533 ನಗದು ವಶಪಡಿಸಿಕೊಳ್ಳಲಾಗಿದೆ. 1,08,65,72,850 ರೂಪಾಯಿ ಮೌಲ್ಯದ 1,25,54,191.41 ಲೀಟರ್ ಅಕ್ರಮ ಮದ್ಯ,1,27,850 ಮೌಲ್ಯದ 4.894 ಕೆ.ಜಿ ಡ್ರಗ್ಸ್ ಮತ್ತು ನಾರ್ಕೋಟಿಕ್ಸ್, 2,85,000 ರೂಪಾಯಿ ಮೌಲ್ಯದ 46.4 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ 1,80,900 ರೂಪಾಯಿ ಮೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿಗಳು ವಶಕ್ಕೆ ಪಡದಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಲೋಕಸಭಾ ಚುನಾವಣೆಗೆ ಮೈಸೂರು ಜಿಲ್ಲೆಯಾದ್ಯಂತ ಮತದಾರರನ್ನು ಆಕರ್ಷಿಸಲು ವಿಶೇಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.  55 ಸಖಿ ಬೂತ್ ಗಳು,11 ವಿಶೇಷ ಚೇತನರ ಬೂತ್ ಗಳು, 11 ಯುವ ಮತದಾರರ ಬೂತ್ ಗಳು,12 ಥೀಮ್ ಬೇಸ್ ಡ್ ಬೂತ್ ಗಳು, 5 ಸಾಂಪ್ರದಾಯಿಕ ಬೂತ್ ಗಳು, 9 ಬುಡಕಟ್ಟು ಬೂತ್ ಗಳನ್ನ ಸ್ಥಾಪನೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಗಾಯತ್ರಿ ಹೇಳಿದರು.

ಅಂಗವಿಕಲರು ಮತ್ತು ಹಿರಿಯ ನಾಗರೀಕರು ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಗಾಯತ್ರಿ ಹೇಳಿದರು.