ನಟಿ ಅಭಿನಯಾಗೆ ಎರಡು ವರ್ಷ ಜೈಲು

ಬೆಂಗಳೂರು- ಸ್ಯಾಂಡಲ್ ವುಡ್ ನಟಿ ‘ಅನುಭವ’ ಸಿನಿಮಾ ಖ್ಯಾತಿಯ ಅಭಿನಯ ಅವರಿಗೆ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅತ್ತಿಗೆಗೆ ಕಿರುಕುಳ ನೀಡಿದ ಆರೋಪದಲ್ಲಿ ಹೈಕೋರ್ಟ್ ಏಕ ಸದಸ್ಯ ಪೀಠ ಈ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಅಭಿನಯ ಅವರ ಸಹೋದರ ಶ್ರೀನಿವಾಸ್ ಜೊತೆ ಲಕ್ಷ್ಮಿದೇವಿ ಅವರ ವಿವಾಹ 1998 ರಲ್ಲಿ ನೆರವೇರಿತ್ತು.

ಮದುವೆ ನಂತರ ಪತಿ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಮಗು ಆದರೂ ಕಾಟ ನಿಲ್ಲಲಿಲ್ಲ.

ಇದಕ್ಕೆ ತನ್ನ ಪತಿ ಶ್ರೀನಿವಾಸ್ ಜೊತೆ ಅಭಿನಯ, ತಾಯಿ ಜಯಮ್ಮ ಹಾಗೂ ಮತ್ತೊಬ್ಬ ಸಹೋದರ ಚಲುವರಾಜು
ಕೂಡ ಸೇರಿದ್ದರು ಎಂದು ಲಕ್ಷ್ಮೀದೇವಿ 2002 ರಲ್ಲಿ ಬೆಂಗಳೂರಿನ ಚಂದ್ರ ಲೇಔಟ್ ಪೋಲಿಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಕೆಳ ನ್ಯಾಯಾಲಯ ಅಭಿನಯ ಸೇರಿದಂತೆ ನಾಲ್ವರಿಗೆ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಅಭಿನಯ ಮತ್ತು ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಅಭಿನಯ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿದೆ.

ಅಭಿನಯ ಅವರ ತಾಯಿ ಜಯಮ್ಮ,ಸಹೋದರರಾದ ಶ್ರೀನಿವಾಸ್ ಹಾಗೂ ಚಲುವರಾಜುಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಭಿನಯ ಅವರು ಝೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.