ನಟ‌ ಪ್ರಕಾಶ್ ರೈ ವಿರುದ್ಧ ಜೆಡಿಎಸ್ ಕಿಡಿ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್‌ ರೈ ಉರುಫ್‌ ಪ್ರಕಾಶ ರಾಜ್ ಎಂಬ ಕಲಾವಿದ ದಾರಿ ತಪ್ಪಿದ್ದಾರೆ ಎಂದು ಜೆಡಿಎಸ್

ಆರೋಪಿಸಿದೆ.

ಈ ಸಂಬಂಧ ಎಕ್ಸ್ ನಲ್ಲಿ ಕಿಡಿಕಾರಿರುವ ಜೆಡಿಎಸ್, ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ ಎಂದು ವ್ಯಂಗ್ಯವಾಡಿದೆ.

ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ ಪ್ರಕಾಶ್‌ ರಾಜ್‌ ಅವರೇ ಎಂದು ಪ್ರಶ್ನಿಸಿದೆ.

ಮೊರಾರ್ಜಿ ವಸತಿ ಶಾಲೆಗಳಷ್ಟೇ ಅಲ್ಲ, ಸರಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್‌ ಸರಕಾರಕ್ಕೆ ಕೈ ಬರುತ್ತಿಲ್ಲ, ಅಲ್ಲಿನ ಮಕ್ಕಳಿಗೆ ಒಳ್ಳೇ ಆಹಾರವಿಲ್ಲ, ನೀರೂ ಇಲ್ಲ, ಸರಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ ಆದರೆ ಈಚೆಗಷ್ಟೇ ನೀವು ಸ್ಥಾಪಿಸಿದ ನಿರ್ದಿಗಂತಕ್ಕೆ ಹಣದ ಹೊಳೆ ಹರಿಸುತ್ತಿದೆ ರಾಜ್ಯ ಸರಕಾರ,ನಿಮ್ಮ ಜೋಳಿಗೆ ಭರ್ತಿ ಆಗುತ್ತಿದೆ ಅಷ್ಟೇ ಪ್ರಕಾಶ್‌ ರಾಜ್‌ ಅವರೇ ಎಂದು ಟೀಕಿಸಿದೆ.

ಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಸಿಫ್ರಂಟ್ ಎಂಬ ಮಟ್ಟು-ಪಟ್ಟಿನ ಕಳ್ಳಕಂಪನಿಗೆ ಕೋಟಿ ಕೋಟಿ ಸುರಿದಿರುವ ಕಾಂಗ್ರೆಸ್ ಸರಕಾರ, ನಿಮ್ಮ ‘ನಿರ್ದಿಗಂತʼಕ್ಕೂ ಹಣ ಸುರಿಯುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಸ ಹೊಡೆಯೋರೇ ದಿಕ್ಕಿಲ್ಲ, ಕನ್ನಡ ಭವನದಲ್ಲಿ ಧೂಳು ಕೊಡವುವರೂ ಗತಿ ಇಲ್ಲ, ಇಲ್ಲಿ ನಿಮ್ಮ ಜೋಳಿಗೆಯಲ್ಲಿ ಭರ್ತಿ ಝಣ ಝಣ ಕಾಂಚಾಣ ಅದು ಹೇಗೆ ಪ್ರಕಾಶ್‌ ರಾಜ್‌ ಅವರೇ ಎಂದು ಜೆಡಿಎಸ್ ಕುಹಕವಾಡಿದೆ.