ಬೆಂಗಳೂರು:ಕೋವಿಡ್ ಹಾಗೂ ಓಮಿಕ್ರಾನ್ ಹೆಚ್ಚಳವಾಗುತ್ತಿರುವುದರಿಂದ ಇದೇ ಜ.10ರಿಂದ 60 ವರ್ಷ ಮೇಲ್ಪಟ್ಟವರು, ಮುಂಚೂಣಿ ವಾರಿಯರ್ಸ್, ಆರೋಗ್ಯ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವ ಹಿರಿಯ ನಾಗರಿಕರು, ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯರು,ದಾದಿಯರು, ಫ್ರಂಟ್‍ಲೈನ್ ವಾರಿಯರ್ಸ್ ಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಹೇಳಿದರು.
ಅದೇ ರೀತಿ ದೀರ್ಘಕಾಲದ ರೋಗಿಗಳಾಗಿರುವವರಿಗೂ ಡೋಸ್ ನೀಡಲಾಗುತ್ತದೆ ಎಂದರು.
ವಾರಾಂತ್ಯ ಕರ್ಫ್ಯೂ ಸೇರಿದಂತೆ ಕಠಿಣ ಮಾರ್ಗಸೂಚಿಯನ್ನು ಸರ್ಕಾರ ಯಾವುದೇ ದುರದ್ದೇಶದಿಂದ ಜಾರಿಗೆ ತಂದಿಲ್ಲ ಎಂದು ತಿಳಿಸಿದರು.
ನಿರಂತರವಾಗಿ ಸೋಂಕು ಹೆಚ್ಚಳವಾಗುತ್ತಿರುವುದನ್ನು ತಡೆಗಟ್ಟಲು ಕಠಿಣ ನಿಯಮ ಜಾರಿಗೆ ತರಲಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳ ನೇತಾರರು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಮೂರನೇ ಅಲೆಯ ಸೋಂಕು ಅತಿ ವೇಗವಾಗಿ ಹರಡುತ್ತದೆ. ಅದೇ ರೀತಿ ಬಹುಬೇಗ ಕಡಿಮೆಯಾಗುತ್ತದೆ. ಹೀಗಾಗಿ 4ರಿಂದ 6 ವಾರ ಎಚ್ಚರಿಕೆಯಿಂದ ಇದ್ದು ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.
ಸೋಂಕು ಕಾಣಿಸಿಕೊಂಡ ಕೂಡಲೇ ಯಾರೂ ಗಾಬರಿಯಾಗಬಾರದು,ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ, ಈ ರೋಗಾಣು ಮೂಗಿನಿಂದ ಗಂಟಲುವರೆಗೆ ಮಾತ್ರ ಪ್ರವೇಶಿಸುತ್ತದೆ,ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆ ಕಡಿಮೆ ಎಂದು ಹೇಳಿದರು.
ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಸಚಿವರು ಮನವಿ ಮಾಡಿದರು.
ಆರೋಗ್ಯ ತುರ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಾದಯಾತ್ರೆ ನಡೆಸುವ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಅಷ್ಟರಮಟ್ಟಿನ ಸಾಮಾನ್ಯಜ್ಞಾನ ಇದೆ ಎಂದು ಭಾವಿಸುತ್ತೇನೆ. ಇಲ್ಲದಿದ್ದರೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

