ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಳ: ತುಟಿ ಬಿಚ್ಚದ ಬಿಜೆಪಿ ನಾಯಕರು-ಸಿಎಂ

ದಾವಣಗೆರೆ: ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ,ಆದರೆ ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಸಿಎಂ‌ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ‌,ರಾಜ್ಯದಲ್ಲಿ ಸ್ವಲ್ಪ ಬೆಲೆ ಏರಿಕೆಯಾದರೂ ಹೋರಾಟಕ್ಕೆ ಸಿದ್ದರಾಗುವ‌ ಬಿಜಿಪಿಗರು ರೈಲು ದರ‌ ಏರಿಕೆಯಾಗಿದೆ ಇದರಿಂದ ಸಾಮನ್ಯ ಜನರು, ಕೂಲಿ ಕಾರ್ಮಿಕರಿಗೆ ಹೊರೆಯಾದರೂ ಪ್ರಶ್ನೆ ಮಾಡದೆ ಸುಮ್ಮನಿದ್ದಾರೆ ಎಂದು ಟೀಕಿಸಿದರು.

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದಲ್ಲಿ ಟ್ರಕ್ ಚಾಲಕನ ತಪ್ಪಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ ವಿಭಜಕವನ್ನು ದಾಟಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 4 ಮಹಿಳೆಯರು ಹಾಗೂ ಒಂದು ಮಗು ಹಾಗೂ ಟ್ರಕ್ ಚಾಲಕ ಸಾವಿಗೀಡಾಗಿದ್ದಾರೆ. ಬಸ್ಸುಗಳು ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ತೆರಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.