ಡಿಸಿಎಂ ಮೇಲೆ ನಿಗಾ ಇಡಲು ಅನಧಿಕೃತ ತಂಡ ರಚನೆ:ಅಶೋಕ್ ಬಾಂಬ್

ಬೆಂಗಳೂರು: ಉಪ ಮುಖ್ಯ ಮಂತ್ರಿ ಡಿ. ಕೆ. ಶಿವ ಕುಮಾರ್‌ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಿಎಂ ಸಿದ್ದರಾಮಯ್ಯ ಎಸ್‌ಪಿ ನೇತೃತ್ವದಲ್ಲಿ ಅನಧಿಕೃತವಾಗಿ ತಂಡ ರಚಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು,
ಅನುದಾನ ಕಡಿತ ಮಾಡುವುದು, ಫೋನ್‌ ಟ್ಯಾಪ್‌ ಮಾಡುವುದು ಹೀಗೆ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದು ಕಣ್ಣಿಗೆ ಕಾಣದ ಎಸ್‌ಐಟಿ ಆಗಿದೆ ಎಂದು ಟೀಕಿಸಿದರು.

ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸುತ್ತೇವೆ, ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಈ ಬಾರಿಯ ಬಜೆಟ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ದೋಷಗಳನ್ನು ಸಮರ್ಥವಾಗಿ ಮಂಡನೆ ಮಾಡಲಾಗುವುದು. ಕಾಂಗ್ರೆಸ್‌ ಒಡೆದ ಮನೆಯಾಗಿದೆ, ಶಾಸಕರು ಬೀದಿಯಲ್ಲಿ ನಿಂತು ಧಮಕಿ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಆಡಳಿತದ ಅವಧಿ ಮುಗಿಯುತ್ತಾ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ನಡೆದಿದೆ. ಕಳೆದ ಮೂರು ಬಜೆಟ್‌ನಲ್ಲಿ ಅನುದಾನ ಘೋಷಣೆಯಾದರೂ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಮಟ್ಟದಲ್ಲಿ ಸಾಲ ಮಾಡಿದ್ದಾರೆ. ಹಿಂದೂಗಳ ಮೇಲೆ ಹಲ್ಲೆಯಾಗುತ್ತಿದೆ. ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ಕಂದಾಯ ಇಲಾಖೆಯಲ್ಲಿ ಇ ಖಾತಾ ಸಮಸ್ಯೆ ಇದೆ. ಈ ಎಲ್ಲ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಅಡುಗೆ ಅನಿಲ ಸಬ್ಸಿಡಿ ಬಹಳ ವರ್ಷಗಳಿಂದ ಇತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಿಟ್ಟುಕೊಡಿ ಎಂದು ಕರೆ ನೀಡಿದ್ದರು. ಆದರೆ ಗ್ಯಾರಂಟಿ ಯೋಜನೆಯನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಉಳ್ಳವರಿಗೂ ಕೊಡುತ್ತೇನೆಂದು ಸಿದ್ದರಾಮಯ್ಯ ಆಗಲೇ ಹೇಳಿದ್ದರು. ಈಗ ಉಳ್ಳವರು ಬಿಟ್ಟುಕೊಡಿ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಅಶೋಕ್ ಹೇಳಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ಯಾವುದನ್ನೂ ಕಾಂಗ್ರೆಸ್‌ ಈಡೇರಿಸಿಲ್ಲ. ಗುತ್ತಿಗೆದಾರರಿಗೆ 37,000 ಕೋಟಿ ರೂ. ಬಾಕಿ ಕೊಡಬೇಕಿದೆ. ಅದನ್ನು ಕೊಡುವುದು ಬಿಟ್ಟು ಹಿಂದಿನ ಬಿಜೆಪಿ ಬಾಕಿ ಉಳಿಸಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೋವಿಡ್‌ ನಂತರ ಬಸವರಾಜ ಬೊಮ್ಮಾಯಿ ಕೊರತೆ ಇಲ್ಲದ ಬಜೆಟ್‌ ಮಂಡಿಸಿದ್ದರು. ಅದನ್ನು ಸಿದ್ದರಾಮಯ್ಯ ಮುಂದುವರಿಸಬೇಕಿತ್ತು. ಆಗ ಪ್ರಶ್ನೆ ಮಾಡದವರು ಈಗ ಆರೋಪ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.

ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಕರೆತರಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಕೇಂದ್ರ ಸರ್ಕಾರ ಈ ಹಿಂದೆಯೂ ಈ ರೀತಿ ಭಾರತೀಯರನ್ನು ಮರಳಿ ಕರೆತಂದಿದೆ. ಈ ಬಾರಿಯೂ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗುತ್ತದೆ ಎಂದು ಅಶೋಕ ಹೇಳಿದರು.

ಸರ್ವಾಧಿಕಾರಿ ಖಮೇನಿ ಪರ ಮೆರವಣಿಗೆ ಮಾಡಬಾರದು. ಕಾನೂನು ಕೈಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಭಾರತ ಹಾಗೂ ಇಸ್ರೇಲ್‌ ನಡುವಿನ ಸಂಬಂಧ ಉತ್ತಮವಾಗಿದೆ. ಭಾರತ ಯಾವುದೇ ದೇಶಗಳ ವಿರೋಧಿ ಅಲ್ಲ. ಯುದ್ಧ ಆಗಬಾರದು ಎಂಬುದು ನನ್ನ ಅಭಿಪ್ರಾಯ ಎಂದು ಪ್ರತಿಪಕ್ಷ ನಯಕ ತಿಳಿಸಿದರು.