ಬೆಂಗಳೂರು: ಸಾಲವೇ ಎಲ್ಲದಕ್ಕೂ ವಾಮಮಾರ್ಗ ಎಂದುಕೊಂಡಿರುವ ಈ ಶತಮಾನದ ನಕಲಿ ಅರ್ಥ ಶಾಸ್ತ್ರಜ್ಞ ಸಾಲ- ಶೂಲದ ಹರಿಕಾರ ಸಾಲರಾಮಯ್ಯ ಅವರು ಕರ್ನಾಟಕವನ್ನು ಸಾಲ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
2025–26ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲದ ಮೊತ್ತ 8.14 ಲಕ್ಷ ಕೋಟಿಯಷ್ಟಾಗಲಿದೆ ಮತ್ತು ಇದು ರಾಜ್ಯದ ಜಿಎಸ್‌ಡಿಪಿಯ ಶೇ26.5ರಷ್ಟಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂದಾಜಿಸಿದ್ದು, ಇದರಿಂದ 7 ಕೋಟಿ ಕನ್ನಡಿಗರ ತಲಾ ಸಾಲ 1,16,258 ರೂಪಾಯಿಗಳಿಗೆ ಏರಲಿದೆ ಎಂದು ಅಶೋಕ್ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಾಲರಾಮಯ್ಯನವರು ಜಾರಿಗೆ ತಂದಿರುವ ಅವೈಜ್ಞಾನಿಕ ಗ್ಯಾರೆಂಟಿಗಳು, ಮಾಡಿರುವ ಸಾಲು ಸಾಲು ಹಗರಣಗಳು ಕನ್ನಡಿಗರ ಮೇಲೆ ಲಕ್ಷಾಂತರ ಕೋಟಿ ಸಾಲದ ಹೊರೆ ಹೊರಿಸಿ ಕರ್ನಾಟಕದ ಆರ್ಥಿಕ ಶಿಸ್ತನ್ನು ಹಳಿ ತಪ್ಪಿಸಿದೆ ಎಂದು ಪ್ರತಿಪಕ್ಷ ನಾಯಕ ಟೀಕಿಸಿದ್ದಾರೆ.
ಸಾಲದ ಸುಳಿಗೆ ಕರುನಾಡು ಸಿಲುಕಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಬಿದ್ದಿದೆ. ಆರ್ಥಿಕತೆ ಹಳ್ಳ ಹಿಡಿದಿದೆ.
ಸಿಎಂ ಸಿದ್ದರಾಮಯ್ಯನವರೇ, ತಮ್ಮ ಕೃಪೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಈಗಾಗಲೇ ಪಾತಾಳಕ್ಕೆ ಕುಸಿದಿದೆ,ಅದು ಯಾವ ಮುಖ ಇಟ್ಟುಕೊಂಡು ಈಗ ಇನ್ನೊಂದು ಬಜೆಟ್ ಮಂಡಿಸುತ್ತೀರಿ ಸ್ವಾಮಿ, ಕನ್ನಡಿಗರ ಕ್ಷಮೆ ಕೇಳಿ, ರಾಜೀನಾಮೆ ಕೊಟ್ಟು ಹೊರಡಿ, ಕರ್ನಾಟಕವನ್ನು ಉಳಿಸಿ ಎಂದು ಅಶೋಕ್ ವ್ಯಂಗ್ಯ ಸಲಹೆ ನೀಡಿದ್ದಾರೆ.

