ಡಿಕೆಶಿ ಪಾದಯಾತ್ರೆ ನಾಟಕ: ಅಶ್ವತ್ಥನಾರಾಯಣ ವ್ಯಂಗ್ಯ

ಬೆಂಗಳೂರು: ಸಾಮಾನ್ಯ ಜನರು ಸಂಕಷ್ಟ ಅನುಭವಿಸಿದರೂ ಪರವಾಗಿಲ್ಲ, ತಮಗೆ ಪ್ರಚಾರ ಸಿಕ್ಕಿದರೆ ಸಾಕು ಎಂಬ ದುರುದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಹೆಸರಲ್ಲಿ ಪಾದಯಾತ್ರೆಯ ನಾಟಕವಾಡುತ್ತಿದ್ದಾರೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,

ಇದು ಡಿಕೆಶಿ ಅವರ ಪಶ್ಚಾತ್ತಾಪದ ಯಾತ್ರೆಯಾಗಿದೆ ಎಂದರು.

ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿರುವ ಕಾಂಗ್ರೆಸ್ಸಿನ 30ಕ್ಕೂ ಹೆಚ್ಚು ನಾಯಕರ ಮೇಲೆ  ಈಗಾಗಲೇ ಎಫ್ಐಆರ್ ದಾಖಲಾಗಿದೆ. ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಮೇಕೆದಾಟು ಯೋಜನೆಗೆ 2013ರಲ್ಲೇ ಹಸಿರು ನಿಶಾನೆ ಸಿಕ್ಕಿತ್ತು. ಆಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿತ್ತು. ಅಂದಿನ ಸರಕಾರದಲ್ಲಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಈ ಯೋಜನೆಯ ಬಗ್ಗೆ ಆಸಕ್ತಿ ವಹಿಸಿದ್ದರು.

ಆದರೆ, 2019ರವರೆಗೂ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ನಿಟ್ಟಿನಲ್ಲಿ ಒಂದೇ ಕ್ರಮ ತಗೆದುಕೊಳ್ಳಲಿಲ್ಲ. ಆಗ ಸಚಿವರಾಗಿದ್ದ ಶಿವಕುಮಾರ್ ಏಕೆ  ಮೌನ ವಹಿಸಿದ್ದರು ಎಂದು ಸಚಿವರು ಪ್ರಶ್ನಿಸಿದರು.

ಶಿವಕುಮಾರ್ ಅವರು ಸದನದಲ್ಲಿ ಒಂದು ಬಾರಿಯೂ ಮೇಕೆದಾಟು ಯೋಜನೆಯ ಬಗ್ಗೆ ಮಾತನಾಡಿಲ್ಲ. ಹಿಂದಿನ ಸರಕಾರದಲ್ಲಿ ತ್ರಿಮೂರ್ತಿಗಳಾಗಿದ್ದ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಎಂ.ಬಿ.ಪಾಟೀಲರ ಅಸಲಿ ಬಣ್ಣ ಎಲ್ಲರಿಗೂ ಗೊತ್ತಿದೆ.

ಈಗ ಕೆಪಿಸಿಸಿ ಅಧ್ಯಕ್ಷರ ಬಯಲಾಟವನ್ನು ನೋಡುವ ಸ್ಥಿತಿಗೆ ಕಾಂಗ್ರೆಸ್ ಬಂದಿರುವುದು ನಗೆಪಾಟಲಿನ ವಿಷಯ ಎಂದು ಅಶ್ವಥ್ ನಾರಾಯಣ ವ್ಯಂಗ್ಯವಾಡಿದರು.

ಶಿವಕುಮಾರ್ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುವ ಸ್ವಾರ್ಥದಿಂದ ಪಾದಯಾತ್ರೆಯನ್ನು ಹಿಡಿದುಕೊಂಡಿದ್ದಾರೆ. ಆದರೆ, ಇದರಿಂದ ಕೊರೋನಾ ವೇಗವಾಗಿ ಹಬ್ಬಬಹುದೇ ವಿನಾ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದರು.

ಏಳು ಬಾರಿ ಶಾಸಕರಾಗಿರುವ ಶಿವಕುಮಾರ್ ಅವರಿಗೆ ಇಡೀ ರಾಮನಗರ ಜಿಲ್ಲೆಯಲ್ಲಿ ಒಂದು ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಆಗಿಲ್ಲ. ಈಗ ಬುಡ ಅಲ್ಲಾಡುತ್ತಿರುವುದರಿಂದ ವ್ಯರ್ಥ ಕಸರತ್ತಿಗೆ ಇಳಿದಿದ್ದಾರೆ. ಈ ಮೂಲಕ ಅವರು ಜನರ ಮುಂದೆ ಬೆತ್ತಲಾಗಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.