ಮೈಸೂರು: ಸೀಸನಲ್ ಟಿಕಟ್ ಹೊಂದಿರುವ ಪ್ರಯಾಣಿಕರು ಬೆಂಗಳೂರು-ಮೈಸೂರು ನಡುವಿನ ಟುಟಿಕೋರಿನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು ಪ್ರತಿ ನಿತ್ಯ ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ಟುಟಿಕೋರಿನ್ ಎಕ್ಸ್ ಪ್ರೆಸ್ ಹಾಗೂ ಗೋಲ್ ಗುಂಬಜ್ ಎಕ್ಸ್ಪ್ರೆಸ್ ಟ್ರೈನ್ ನಲ್ಲಿ ಸೀಸನಲ್ ಟಿಕಟ್ ಹೊಂದಿರುವ ಪ್ರಯಾಣಿಕರು ಪ್ರಯಾಣಿಸಲು ನಿರ್ಬಂಧ ಹೇರಲಾಗಿತ್ತು. ಇದರ ಸಂಬಂಧ ರೈಲ್ವೆ ಪ್ರಯಾಣಿಕರು ತಮ್ಮನ್ನು ಭೇಟಿ ಮಾಡಿ ಸದರಿ ಟ್ರೈನ್ ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡುವಂತೆ ಕೋರಿ ಮನವಿ ಮಾಡಿದರು. ರೈಲ್ವೆ ವಿಭಾಗೀಯ ನಿಯಂತ್ರಣಾಧಿಕಾರಿಗಳ (ಡಿ.ಆರ್.ಎಂ)ವರಲ್ಲಿ ಮಾತನಾಡಿ ಸದರಿ ಟ್ರೈನ್ ಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವಂತೆ ಕೋರಿದ್ದಾಗಿ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸೀಸನಲ್ ಟಿಕಟ್ ಹೊಂದಿರುವ ಪ್ರಯಾಣಿಕರು ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ಟುಟಿಕೋರಿನ್ ಎಕ್ಸ್ ಪ್ರೆಸ್ ಟ್ರೈನ್ ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಗೋಲ್ ಗುಂಬಜ್ ಎಕ್ಸ್ಪ್ರೆಸ್ ಟ್ರೈನ್ ನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವುದಾಗಿ ಅವರು ತಿಳಿಸಿದ್ದಾರೆ.

