ರಾಜ್ಯದ ಸಾಲದ ಹೊರೆ ಹೆಚ್ಚಳ: ನವೀನ್ ಕುಮಾರ್ ಕಳವಳ

ಮೈಸೂರು:ಕಷ್ಟದ ಸಮಯದಲ್ಲಿ ಜನರಿಗೆ ತೆರಿಗೆ ವಿನಾಯಿತಿ ನೀಡಿಲ್ಲ. ಕರ್ನಾಟಕಕ್ಕೆ ಸಾಲದ ಹೊರೆ ಹೆಚ್ಚು ಮಾಡಲಾಗಿದೆ.ಹಾಗಾಗಿ ರಾಜ್ಯದ ಜನರೇ ಮತ್ತಷ್ಟು ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಬರಬಹುದು ಎಂದು ಕಾಂಗ್ರೆಸ್ ಯುವ ಮುಖಂಡ ಎನ್. ಎಂ.  ನವೀನ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ದೇಶದ ಸಾಲ ಹೆಚ್ಚುತ್ತಲೇ ಇದೆ. 93 ಲಕ್ಷ ಕೋಟಿ ಇದ್ದ ಸಾಲ ಒಂದೇ ವರ್ಷದಲ್ಲಿ 135 ಲಕ್ಷ ಕೋಟಿ ದಾಟಿದೆ. ರಾಜ್ಯದ ಪಾಲಿನ ಜಿಎಸ್‌ಟಿ ಇನ್ನೂ ಕೊಟ್ಟಿಲ್ಲ. 30 ಸಾವಿರ ಕೋಟಿ ಸಾಲ ಕೊಡುತ್ತಾರೆ. ಇದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ಹಣದುಬ್ಬರ ಕಡಿಮೆ ಮಾಡಲು ಕ್ರಮ ತೆಗೆದುಕೊಂಡಿಲ್ಲ. ಪೆಟ್ರೋಲ್ ಉತ್ಪನ್ನದ ಮೇಲೆ ಶೇ 2ರಷ್ಟು ತೆರಿಗೆ ಹಾಕಲಾಗಿದೆ. ನದಿ ಜೋಡಣೆ ಪ್ರಸ್ತಾಪ ಮಾಡಿದ್ದರೂ ರಾಜ್ಯವನ್ನು ಕಡೆಗಣಿಸಲಾಗಿದೆ‌ ಎಂದು ಆರೋಪಿಸಿದ್ದಾರೆ.

ಈ ಬಾರಿಯ ಕೇಂದ್ರ ಬಜೆಟ್ ಸುಳ್ಳು ಘೋಷಣೆಗಳ ನಿರಾಶಾದಾಯಕವಾದುದು, ಯಾವ ವರ್ಗದ ಜನರಿಗೂ ಯಾವ ಕೊಡುಗೆಯೂ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳಿಂದ ಕರ್ನಾಟಕದ ಜನರು ಕೋವಿಡ್, ಅತಿವೃಷ್ಟಿ, ಅನಾವೃಷ್ಟಿಯಿಂದ ಬದುಕನ್ನೇ ಕಳೆದುಕೊಂಡಿದ್ದಾರೆ. ಇವರ ಆರ್ಥಿಕ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಬಡ ವರ್ಗದ ಜನರನ್ನು ಮರೆತು ಶ್ರೀಮಂತರ ಪರವಾಗಿ ಯೋಜನೆಗಳನ್ನು ಪ್ರಕಟಿಸಲಾಗಿದೆ ಎಂದು ಎನ್.ಎಂ. ನವೀನ್ ಕುಮಾರ್ ಟೀಕಿಸಿದ್ದಾರೆ.