ಮೈಸೂರು:ಉಡುಪಿ, ಕುಂದಾಪುರದಲ್ಲಿ ಎದುರಾಗಿರುವ ಹಿಜಾಬ್ ವಿವಾದ ಈಗ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲೂ ಪ್ರತಿಧ್ವನಿಸಿದೆ.
ಮೈಸೂರಿನ ಹಲವು ವಿದ್ಯಾರ್ಥಿನಿಯರು ಶುಕ್ರವಾರ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಮೈಸೂರಿನ ಬನ್ನಿಮಂಟಪದ ಹೈವೆ ವೃತ್ತದ ಬಳಿ ಸೇರಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ನಂತರ ಐ ಲವ್ ಹಿಜಾಬ್ ಎಂಬ ಪ್ಲೇಕಾರ್ಡ್ ಪ್ರದರ್ಶಿಸಿದರು.
ಅಷ್ಟೆ ಅಲ್ಲದೆ ಎಲ್ಲಾ ಕಾಲೇಜಿಗಳಲ್ಲೂ ಹಿಜಾಬ್ ಗೆ ಅವಕಾಶ ಕಲ್ಪಿಸುವಂತೆ ವಿವಿಧ ಘೋಷಣಾ ಫಲಕ ಹಿಡಿದು ಅಭಿಯಾನ ಪ್ರಾರಂಭಿಸಿದರು.
ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜು ಸೇರಿದಂತೆ ಹಲವು ಕಾಲೇಜಿನ ವಿದ್ಯಾರ್ಥಿನಿಯರು ಬನ್ನಿಮಂಟಪದಲ್ಲಿ ಸೇರಿ ಅಲ್ಲಿ ಹಿಜಾಬ್ ಧರಿಸಿ ಕಾಲೇಜಿನತ್ತ ಹೊರಟರು.
ಇತ್ತ ಹಿಜಾಬ್ ಗೆ ಸವಾಲು ಎಂಬಂತೆ ಕುಂದಾನಗರಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು.
ಈ ಮೂಲಕ ಉಡುಪಿ ಹಾಗೂ ಕುಂದಾಪುರದಲ್ಲಿದ್ದ ಹಿಜಾಬ್ ವಿವಾದ ಈಗ ಮೈಸೂರು, ಬೆಳಗಾವಿ ಸೇರಿದಂತೆ ಎಲ್ಲೆಡೆ ಹರಡುತ್ತಿದ್ದು ಮುಂದೆ ಇದು ಸರ್ಕಾರಕ್ಕೆ ತಲೆನೋವಾಗುವುದು ಗ್ಯಾರಂಟಿ.
ಹಿಜಾಬ್ ವರ್ಸಸ್ ಕೇಸರಿ ಎಂಬಂತಾಗಿದ್ದು ಎರಡು ಧರ್ಮದವರು ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹೋರಾಟಕ್ಕಿಳಿದಿದ್ದಾರೆ ನಿಜಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಹೀಗೆ ಆಗುತ್ತಿರುವುದು ದುರಂತವೇ ಸರಿ.

