ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ನವರು ಕೈಗೊಂಡಿರುವ ಪಾದಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಬಿಡದಿಯಿಂದ ಕೆಂಗೇರಿವರೆಗೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಾಗಿಬಂದರು.
ಉರಿ ಬಿಸಿಲಿನಲ್ಲಿ ಕಾಂಗ್ರೆಸ್ ಮುಖಂಡರು ಹೆಜ್ಜೆ ಹಾಕುತ್ತಾ ನಮ್ಮ ನೀರು, ನಮ್ಮ ಹಕ್ಕು ಮೇಕೆದಾಟು ಯೋಜನೆ ಆಗಲೇಬೇಕು ಎಂಬ ಘೋಷಣೆಗಳನ್ನು ಕೂಗಿದರು.
ಕೆಂಗೇರಿಯಿಂದ ಅದ್ವೈತ ಪೆಟ್ರೋಲ್ ಬಂಕ್‍ವರೆಗೆ ಮುಖಂಡರು ಬಿಸಿಲಿನ ಝಳವನ್ನು ಮರೆತು ಹೆಜ್ಜೆ ಹಾಕಿದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ನಮ್ಮ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡುತ್ತಿವೆ ಎಂದು ದೂರಿದರು.
ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದನ್ನ ನಾವು ದೆಹಲಿ ಮಟ್ಟಕ್ಕೂ ಕೊಂಡೊಯ್ಯುತ್ತೇವೆ ಎಂದರು.
ಮೇಕೆದಾಟು ಯೋಜನೆಯಿಂದ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆ ಸೇರಿದಂತೆ ಸುಮಾರು 4 ಕೋಟಿ ಜನರಿಗೆ ಕುಡಿಯುವ ನೀರು ಸರಬರಾಜು ಆಗುತ್ತದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ತಿಳಿಸಿದರು.
ಈ ಯೋಜನೆ ಜಾರಿಗೆ ಬೇರೆ ಯಾವ ರಾಜ್ಯಗಳಿಂದಲೂ ತಕರಾರು ಇಲ್ಲ. ಆದರೆ ಬಿಜೆಪಿಯೇ ತಕರಾರು ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಅವಧಿಯಲ್ಲಿ ಈ ಯೋಜನೆಗೆ ಡಿಪಿಆರ್ ಮಾಡಲಾಗಿತ್ತು. 4 ವರ್ಷಗಳಾದರೂ ಈ ಯೋಜನೆ ಜಾರಿ ಬಗ್ಗೆ ಡಬಲ್ ಇಂಜಿನ್ ಸರ್ಕಾರ ಚಕಾರವೆತ್ತಿಲ್ಲ ಎಂದು ಟೀಕಿಸಿದರು.
ಈ ನಿರ್ಲಕ್ಷ್ಯ ಧೋರಣೆಯನ್ನು ನಾವು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಹೋರಾಟ ಕೈಗೊಂಡಿದ್ದೇವೆ. ಇದಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದರು.

