ಪಂಚರಾಜ್ಯಗಳ ಚುನಾವಣೆ: ಯಪಿಯಲ್ಲಿ ಬಿಜೆಪಿ ಪಾರಮ್ಯ,ಪಂಜಾಬ್ ನಲ್ಲಿ ಆಪ್ ಸ್ವೀಪ್

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ‌ ಎಂದು ಬಿಂಬಿಸಲಾಗಿದ್ದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಆಮ್‍ ಆದ್ಮಿ ಪಕ್ಷ ದೆಹಲಿಯಿಂದ ಹೊರಗೂ ಕಾಲಿಟ್ಟು, ಪಂಜಾಬ್‍ ನಲ್ಲಿ ಅಪೂರ್ವ ಜಯ ಸಾಧಿಸಿ ಅಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಏಳು ಹಂತಗಳಲ್ಲಿ ನಡೆದ ಪಂಚರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಾಂಡ್ ಹಾಗೂ ಮಣಿಪುರ ರಾಜ್ಯಗಳಲ್ಲಿ ಬಿಜೆಪಿ ಮೂರರಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು,  ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದ 403 ಕ್ಷೇತ್ರಗಳಲ್ಲಿ  ಬಿಜೆಪಿ 270ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.

ವಿಪಕ್ಷಗಳು ಬಿಜೆಪಿಯನ್ನು ಮಣಿಸುವ ಗುರಿಯೊಂದಿಗೆ ನಡೆಸಿದ ಕಾರ್ಯತಂತ್ರಗಳು ವಿಫಲವಾಗಿದೆ. ಆದರೂ ಸಮಾಜವಾದಿ ಪಕ್ಷದ ಅಖಿಲೇಶ್‍ಯಾದವ್ ಅವರು ಭಾರೀ ಪೈಪೋಟಿ ನೀಡುವ ಮೂಲಕ ಪಕ್ಷವನ್ನು 125ರ ಗಡಿ ದಾಟಿಸಿದ್ದಾರೆ.

ಕಾಂಗ್ರೆಸ್ ಪೂರ್ಣ ಮುಗ್ಗರಿಸಿದ್ದು, ಕೇವಲ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ.

ಬಹುಜನ ಸಮಾಜವಾದಿ ಪಕ್ಷ ಕೂಡ ಕೇವಲ 6 ಕ್ಷೇತ್ರವನ್ನು ಗೆಲ್ಲುವ ಮೂಲಕ ಮಾಯಾವತಿ ಸಂಪೂರ್ಣ ಹಿನ್ನಡೆ ಅನುಭವಿಸಿದ್ದಾರೆ.

ಕಾಂಗ್ರೆಸ್‍ನ ಅಧಿನಾಯಕಿ ಸೋನಿಯಾಗಾಂಧಿ ಅವರ ರಾಯ್‍ ಬರೇಲಿ ಕ್ಷೇತ್ರದಲ್ಲೇ ಕಾಂಗ್ರೆಸ್ ಸೋಲು ಕಂಡಿರುವುದು ಅವರನ್ನು ಚಿಂತೆಗೀಡು ಮಾಡಿದೆ.

ಇನ್ನು ಪಂಜಾಬ್‍ನಲ್ಲಿ ಆಮ್‍ ಆದ್ಮಿ ಪಕ್ಷ ಪ್ರಚಂಡ ಗೆಲುವು ಸಾಧಿಸಿದೆ. ಒಟ್ಟು 117 ಸ್ಥಾನಗಳ ಪೈಕಿ 80ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅರವಿಂದ ಕೇಜ್ರಿವಾಲ್ ವರ್ಚಸ್ಸು ದೆಹಲಿ ಗಡಿ ದಾಟಿದೆ.

ಚರಣ್ ಜಿತ್ ಸಿಂಗ್ ಚನ್ನಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಕೇವಲ 15 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು, ಹಿಂದೊಮ್ಮೆ ಗತವೈಭವದಿಂದ ಮೆರೆದಿದ್ದ ಶಿರೋಮಣಿ ಅಕಾಲಿದಳ  ನೆಲಕಚ್ಚಿದೆ. ಬಿಜೆಪಿ ಕೇವಲ 4 ಸ್ಥಾನಗಳನ್ನು ಪಡೆದು ತೃಪ್ತಿಪಟ್ಟುಕೊಂಡಿದೆ.

ಇನ್ನು ಉತ್ತರಖಾಂಡ್ ನಲ್ಲಿ ಬಿಜೆಪಿ ಬಹುಮತ‌ ಸಾಧಿಸಿದ್ದು, ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಒಟ್ಟು 70 ಕ್ಷೇತ್ರಗಳಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು, ಕಾಂಗ್ರೆಸ್ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಈಶಾನ್ಯ ರಾಜ್ಯದ ಮಣಿಪುರದಲ್ಲಿ ಭಾರೀ ಪ್ರಯಾಸದ ನಡುವೆ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

ಒಟ್ಟು 60 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಕಾಂಗ್ರೆಸ್ 14 ಸ್ಥಾನ, ಎನ್‍ಪಿಪಿ 11, ಎನ್‍ಪಿಎಫ್ 4 ಹಾಗೂ ಇತರರು 6 ಸ್ಥಾನಗಳನ್ನು ಗಳಿಸಿದ್ದಾರೆ.

ಕಡಲ ಕಿನಾರೆ ಗೋವಾದಲ್ಲೂ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಅಧಿಕಾರ ಹಿಡಿಯಲು ಹರಸಾಹಸ ಮಾಡುತ್ತಿದೆ.

ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. 40 ಸ್ಥಾನಗಳ ಪೈಕಿ 19 ಸ್ಥಾನ ಬಿಜೆಪಿ ಪಡೆದಿದ್ದರೆ ಕಾಂಗ್ರೆಸ್ 10 ಸ್ಥಾನ ಪಡೆದಿದೆ. ಟಿಎಂಸಿ 5, ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಸಿದ್ದಾರೆ.

ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಗಳು ಮುಂದುವರೆದಿದ್ದು ಕಾಂಗ್ರೆಸ್ ಕೂಡ ಪೈಪೋಟಿ ನಡೆಸಿದೆ.