ಘಟಾನುಘಟಿ ನಾಯಕರುಗಳಿಗೆ ಸೋಲುಣಿಸಿದ ಮತದಾರ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರುಗಳಿಗೆ ಪಂಜಾಬ್ ಮತದಾರರು ಸೋಲಿನ ಕಹಿ ತಿಳಿಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಚರಣ್‍ಜಿತ್ ಸಿಂಗ್ ಚನ್ನಿ ಅವರು ಚಮ್ಕಾರ್ ಸಾಹೀಬ್ ಹಾಗೂ ಬಾದೂರು ಕ್ಷೇತ್ರಗಳಿಂದ ಸ್ಪರ್ಧಿಸಿದ್ದು, ಎರಡು ಕ್ಷೇತ್ರಗಳಲ್ಲೂ ಹೀನಾಯ ಸೋಲು ಅನುಭವಿಸಿದ್ದಾರೆ.

ಅದೇ ರೀತಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವಜೋದ್‍ಸಿಂಗ್ ಸಿಧು  ಅಮೃತ್‍ಸರ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅವರಿಗೂ ಮತದಾರರು ಸೋಲು ತೋರಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದು, ಸಿಧು ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದ ನಂತರ ಹೊಸ ಪಕ್ಷ ಸ್ಥಾಪನೆ ಮಾಡಿ ಬಿಜೆಪಿ ಮೈತ್ರಿಯೊಂದಿಗೆ ಪಾಟಿಯಾಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮರೇಂದರ್‍ ಸಿಂಗ್ ಅವರುಮಣ್ಣು ಮುಕ್ಕಿದ್ದಾರೆ.

ಅದೇ ರೀತಿ ತಮ್ಮ ಸಾಮಾಜಿಕ ಕಳಕಳಿಯಿಂದ ಇಡೀ ದೇಶದ ಗಮನ ಸೆಳೆದಿದ್ದ ಬಾಲಿವುಡ್ ನಟ ಸೋನುಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಪಂಜಾಬ್‍ನ ಮೋಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಅವರಿಗೂ ಸೋಲಿನ ರುಚಿಯಾಗಿದೆ.

ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ಮಾದರಿಯಲ್ಲೇ ಶಿರೋಮಣಿ ಅಕಾಲಿದಳದ ಪ್ರಕಾಶ್‍ಸಿಂಗ್ ಬಾದಲ್, ಮಜಿತಿಯಾ ಹಾಗೂ ಮನ್‍ಪ್ರೀತ್‍ರಂತಹ ನಾಯಕರಿಗೂ  ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.

ಇದೇ ಮೊದಲ ಬಾರಿಗೆ ಪಂಜಾಬ್‍ನ ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಿಸಿದ್ದ ಆಮ್ ಆದ್ಮಿ ಇತರ ಉಳಿದ ಎಲ್ಲ ಪಕ್ಷಗಳನ್ನೂ ಹಿಂದಿಕ್ಕಿ ಭಾರೀ ಅಂತರದ ವಿಜಯ ಸಾಧಿಸುವ ಮೂಲಕ ಸರ್ಕಾರ ರಚನೆ ಮಾಡಲಿದೆ.

ಮತ್ತೆ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಸಿಧು ಅವರಿಗೆ ಭ್ರಮನಿರಸನವಾಗಿದ್ದು, ಪಂಜಾಬ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.