ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಎರಡು ವರ್ಷಗಳ ನಂತರ ಬುಧವಾರ ಪಂಚ ರಥೋತ್ಸವ ಹಾಗೂ ದೊಡ್ಡ ಜಾತ್ರೆ ವೈಭವದಿಂದ ನಡೆಯಿತು.
ಮುಂಜಾನೆ 3.30 ರಿಂದ 4.30ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಪಂಚ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ನಸುಕಿನ ಜಾವ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಚಾಲನೆ ನೀಡಿದರು.
96 ಅಡಿ ಎತ್ತರದ ಬೃಹತ್ ರಥ ಶ್ರೀಕಂಠೇಶ್ವರನ ಉತ್ಸವಮೂರ್ತಿಯನ್ನು ಹೊತ್ತು ಸಾಗಿತು. ಸಹಸ್ರಾರು ಭಕ್ತರು ರಥ ಎಳೆದು ಪುನೀತರಾದರು. ದೇವಸ್ಥಾನದ ಸುತ್ತ ಮೆರವಣಿಗೆ ನಡುವೆ ರಥ ಸಾಗಿತು.
ಶ್ರೀಕಂಠೇಶ್ವರನ ಮಹಾ ರಥದ ತರುವಾಯ ಪಾರ್ವತಿ, ಗಣಪತಿ ಸೇರಿದಂತೆ ನಾಲ್ಕು ರಥಗಳು ಸರದಿ ಸಾಲಿನಲ್ಲಿ ಸಾಗಿದವು.
ಸೂರ್ಯೋದಯಕ್ಕೂ ಮುನ್ನ ನಡೆದ ಪಂಚ ಮಹಾ ರಥೋತ್ಸವವು ವಿದ್ಯುತ್ ಬೆಳಕಿನಲ್ಲಿ ಕಂಗೊಳಿಸಿತು.
ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಸಾಂಕೇತಿಕ ಮತ್ತು ಸಾಂಪ್ರದಾಯಿಕವಾಗಿ ಪಂಚ ಮಹಾ ರಥೋತ್ಸವ ನಡೆದಿತ್ತು.
ಎರಡು ವರ್ಷಗಳ ನಂತರ ನಡೆದ ಅದ್ದೂರಿ ರಥೋತ್ಸವ ಹಾಗೂ ಜಾತ್ರೆಯನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.
ಕೊರೊನಾ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು.
ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಅವರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಜಾತ್ರೆಯಲ್ಲಿ ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ್ ಅವರ ಭಾವಚಿತ್ರ,ಕನ್ನಡ ಬಾವುಟಗಳು ಗಮನ ಸೆಳೆದವು.
ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿರುವ ಭಕ್ತರಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರೆಗೆ ಒಂದು ದಿನ ಮುಂಚಿತವಾಗಿಯೇ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ತಂಡೋಪತಂಡವಾಗಿ ಬಂದು ದೇವಾಲಯದ ಮೊಗಸಾಲೆ ಹೊರ ಆವರಣ ಸೇರಿದಂತೆ ಶ್ರೀ ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಬೀಡುಬಿಟ್ಟಿದ್ದು ಕಂಡು ಬಂದಿತು.
ಎಲ್ಲಾ ಭಕ್ತರಿಗೆ ತಾಲೂಕು ಆಡಳಿತ ಹಾಗೂ ದೇವಾಲಯದ ವತಿಯಿಂದ ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಕರ್ಯ ಒದಗಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಾರ್ಚ್ 18 ರ ಸಂಜೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ಜರುಗುವ ಮೂಲಕ ದೊಡ್ಡಜಾತ್ರೆ ಸಂಭ್ರಮಕ್ಕೆ ತೆರೆಬೀಳಲಿದೆ.

