ಬೆಂಗಳೂರು: ಉಕ್ರೇನ್ ನಿಂದ ನವೀನ್ ಮೃತ ದೇಹವನ್ನು ತರಲು ಅಸಾಧ್ಯವಾದದನ್ನು ಪ್ರಧಾನಿ ನರೇಂದ್ರ ಮೋದಿಯವರ ಭಗೀರಥ ಪ್ರಯತ್ನದಿಂದ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನವೀನ್ ಮೃತದೇಹವನ್ನು ಬರಮಾಡಿಕೊಂಡ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ಕನ್ನಡಿಗರ ಪರವಾಗಿ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಉಕ್ರೇನ್ ಸಮೀಪದ ಎಲ್ಲಾ ದೇಶಗಳ ಸಂಪರ್ಕವನ್ನು ಬೆಳೆಸಿ ರಾಜತಾಂತ್ರಿಕವಾಗಿ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಅನುಮತಿ ಪಡೆದು ಕರೆತರಲಾಗಿದೆ.
ಇಡೀ ದೇಶದ 19000 ವಿದ್ಯಾರ್ಥಿಗಳನ್ನು ವಾಪಸ್ಸು ಕರೆತರಲಾಗಿದ್ದು, ಕರ್ನಾಟಕದ 572 ಜನ ಹಿಂದಿರುಗಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ, ದೆಹಲಿ, ಗಜಿಯಾಬಾದ್, ಮುಂಬೈ ನಗರಗಳಿಂದ ನವೀನ್ ದೇಹವನ್ನು ಮನೆಗೆ ಮುಟ್ಟಿಸುವವರೆಗೂ ಕರ್ನಾಟಕ ಸರ್ಕಾರ ಕಾಳಜಿ ವಹಿಸಿದೆ ಎಂದು ಬೊಮ್ಮಾಯಿ ಹೇಳಿದರು.
ಉಕ್ರೇನ್ ರಾಯಭಾರಿ ಕಚೇರಿಯೊಂದಿಗೆ ಐ.ಎ. ಎಸ್ ಅಧಿಕಾರಿ ಮನೋಜ್ ರಾಜನ್ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದು, ಶ್ರಮವಹಿಸಿದರು,ಈ ಕಾರ್ಯಾಚರಣೆ ಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಉಕ್ರೇನ್ ಮತ್ತು ಪೊಲಾಂಡ್ ಅಧಿಕಾರಿಗಳಿಗೂ ಧನ್ಯವಾದಗಳನ್ನು ತಿಳಿಸಿದರು.
ನವೀನ್ ನನ್ನು ಜೀವಂತವಾಗಿ ತರಲಾಗಲಿಲ್ಲ ಎಂಬ ದುಃಖ ಸದಾ ಇರುತ್ತದೆ. ಈಗ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು. ಇಂಥ ಘಟನೆಗಳು ಮರುಕಳಿಸದಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ನವೀನ್ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಸಿಎಂ ಪ್ರಾರ್ಥಿಸಿದರು.

