ಬೆಲೆ ಏರಿಕೆ ವಾಪಸು ಪಡೆಯಲು ಸಿದ್ದು ಆಗ್ರಹ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್  ಬೆಲೆ ಏರಿಕೆ ಮಾಡಿರುವುದನ್ನು ವಾಪಾಸು ಪಡೆಯಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಯಾರು ಅತ್ಯಧಿಕ ಪ್ರಮಾಣದ ಆಸ್ತಿ ಸಂಪಾದನೆ ಮಾಡಿದ್ದಾರೆ ಅಂಥವರ ಮೇಲೆ ಹೆಚ್ಚು ತೆರಿಗೆ ವಿಧಿಸಿ, ಬಡವರು, ಸಾಮಾನ್ಯ ವರ್ಗದ ಜನರ ಮೇಲಿನ ತೆರಿಗೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆ ವಿರೋಧಿಸಿ ಹೋರಾಟ ಮಾಡಲು ನಮ್ಮ ಪಕ್ಷದಲ್ಲಿ ತೀರ್ಮಾನ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು.

ಐದು ರಾಜ್ಯಗಳ ಚುನಾವಣೆ ಇದೆ ಎಂಬ ಕಾರಣಕ್ಕೆ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಕೊನೆಯ ಬಾರಿ ಬೆಲೆಯೇರಿಕೆ ಮಾಡಿತ್ತು. ಚುನಾವಣೆ ಫಲಿತಾಂಶದ ನಂತರ ಬೆಲೆ ಹೆಚ್ಚಾಗಬಹುದು ಎಂದು ಜನ ನಿರೀಕ್ಷೆ ಮಾಡಿದ್ದರು, ಅದು ನಿಜವಾಗಿದೆ ಎಂದರು.

ಈಗಾಗಲೇ ಜನ ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಬೆಲೆ ನಿಯಂತ್ರಣ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಮೇಲಿನ ತೆರಿಗೆ ಕಡಿಮೆ ಮಾಡಿ, ಸಾಮಾನ್ಯ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದೆ. ಬೆಲೆಯೇರಿಕೆಗೆ ನನ್ನ ವಿರೋಧವಿದೆ. ಕೇಂದ್ರ ಸರ್ಕಾರ  ಬೆಲೆ ಏರಿಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಸಿದ್ದು ಆಗ್ರಹಿಸಿದರು.