ಬೆಂಗಳೂರು: ಜೇಮ್ಸ್ ಚಿತ್ರಕ್ಕೂ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಉತ್ತಮವಾಗಿ ಪ್ರದರ್ಶನವಾಗುತ್ತಿರುವ ಕನ್ನಡ ಸಿನಿಮಾ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಹೇಳಿದರು.
ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಶಿವಣ್ಣ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.
ಒಂದು ಒಳ್ಳೆಯ ಸಿನಿಮಾ ಥಿಯೇಟರ್‍ಗಳಲ್ಲಿ ಪ್ರದರ್ಶನವಾಗುತ್ತಿದ್ದರೆ ಯಾರೂ ಅದನ್ನು ತಡೆಯಬಾರದು. ನಮ್ಮ ತಂದೆ-ತಾಯಿ ಅದನ್ನೇ ಹೇಳಿಕೊಟ್ಟಿರುವುದು ಎಂದು ತಿಳಿಸಿದರು.
ಜೇಮ್ಸ್ ಚಿತ್ರ ಎಲ್ಲಾ ಕಡೆ ಉತ್ತಮವಾಗಿ ಪ್ರದರ್ಶನವಾಗುತ್ತಿದೆ. ಅದನ್ನು ಹಾಗೆಯೇ ಬಿಡಬೇಕು ಎಂದು ಕೋರಿದರು.
ಆರ್ ಆರ್ ಆರ್ ನಂತಹ ಸಿನಿಮಾಗಳು ಬಂದಾಗ ಥಿಯೇಟರ್ ಮಾಲೀಕರು ಅವುಗಳಿಗೆ ಜಾಗ ಮಾಡಿಕೊಳ್ಳುವುದು ಸಹಜ. ಆದರೆ, ಜೇಮ್ಸ್ ಚಿತ್ರ ಉತ್ತಮ ಪ್ರದರ್ಶನವಾಗುತ್ತಿದೆ. ಮಾಲೀಕರು ಎತ್ತಂಗಡಿಗೆ ಅವಕಾಶ ಮಾಡಿಕೊಡಬಾರದು ಎಂದು ಶಿವರಾಜ್ ಕುಮಾರ್ ಮನವಿ ಮಾಡಿದರು.
ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬಂದಿಲ್ಲ. ಇಲ್ಲಿ ಯಾವ ರಾಜಕೀಯವೂ ಇಲ್ಲ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಕನ್ನಡ ಭಾಷೆ, ಕನ್ನಡ ಸಿನಿಮಾಗಳ ವಿಚಾರಕ್ಕೆ ಬಂದಾಗ ನಾನು ಯಾವಾಗಲೂ ಮುಂದೆ ನಿಲ್ಲುತ್ತೇನೆ ಎಂದು ಹೇಳಿದರು.
ನನ್ನ ತಮ್ಮನ ಸಿನಿಮಾ ಆಂತ ಅಲ್ಲ. ಬೇರೆ ಯಾವುದೇ ಸಿನಿಮಾಗಳು ಆದರೂ ನಾನು ಬೆಂಬಲವಾಗಿ ನಿಲ್ಲತ್ತೇನೆ. ಜೇಮ್ಸ್ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಒಂದು ಎಮೋಷನ್ ಇದೆ. ಎಲ್ಲರೂ ಶಾಂತಿ ಕಾಪಾಡಿ, ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

