ಮುಸ್ಲಿಂ ಹೆಣ್ಣು ಮಕ್ಕಳ ಪರ ಬ್ಯಾಟಿಂಗ್ ಮಾಡಲು ಹೋಗಿ ವಿವಾದಕ್ಕೀಡಾದ ಸಿದ್ದು

ಮೈಸೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ  ಮತ್ತೆ ಗುಡುಗಿದ ಸಿದ್ದರಾಮಯ್ಯ ಅವರು, ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪ್ಪಟ್ಟ ತಲೆಗೆ ಹಾಕಿ ಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಿದ್ದು, ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ ಎಂದು ಪ್ರಶ್ನಿಸಿದರು.

ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ. ಮುಸ್ಲಿಂ ಹೆಣ್ಣು ಮಕ್ಕಳು ತಲೆಗೆ ದುಪ್ಪಟ ಹಾಕಿದರೆ ತಪ್ಪೇನು, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ ಎಂದು ಮರು ಪ್ರಶ್ನಿಸಿದರು.

ಇಂತಹ ವಿವಾದ ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದು ಕೊಂಡಿದೆ. ಆದರೆ  ಜನ ಬುದ್ದಿವಂತರು. ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದೂ ಹೇಳಿದರು.

ಬಿಜೆಪಿ ಕೆಲ ವಿವಾದ ಸೃಷ್ಟಿಸಿ ಮತ ಕ್ರೋಢೀಕರಣ ಮಾಡಲು ಯತ್ನಿಸುತ್ತಿದೆ ಎಂದು ಇದೇ ವೇಳೆ ಸಿದ್ದರಾಮಯ್ಯ ಆರೋಪಿಸಿದರು.

ಬಿಜೆಪಿ ಕೆಲ ವಿವಾದ ಸೃಷ್ಟಿಸಿ ಮತ ಕ್ರೋಢೀಕರಣ ಮಾಡಲು ಯತ್ನಿಸುತ್ತಿದೆ. ಮುಸ್ಲಿಂರಿಗೆ ವ್ಯಾಪಾರಕ್ಕೆ ನಿರ್ಬಂಧ ಹಾಕಿರೋದು ತಪ್ಪು. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ವ್ಯಾಪಾರಕ್ಕೆ ನಿರ್ಬಂಧ ಹಾಕುವುದರ ಹಿಂದೆ ಬಿಜೆಪಿಯ ಅಜೆಂಡಾ ಅಡಗಿದೆ ಎಂದು ಸಿದ್ದು ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಂರಿಗೆ ವ್ಯಾಪಾರ ನಿರ್ಬಂಧ ವಿಚಾರದಲ್ಲಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಲ್ಲ. ಬಿಜೆಪಿಯೇ ಈ ವಿಚಾರದಲ್ಲಿ ಇಕ್ಕಟಿಗೆ ಸಿಲುಕಿದೆ ಎಂದು ಹರಿಹಾಯ್ದರು.

ಸಂಘ ಪರಿವಾರದವರು ಅಲ್ಪ ಸಂಖ್ಯಾತರ ಕೊಲೆ ಮಾಡಿದರೆ ಅವರಿಗೆ ಕಡಿಮೆ ಪರಿಹಾರ ಹಣ ಕೊಡುತ್ತಾರೆ. ಮುಸ್ಲಿಮರು ಹಿಂದೂವಿ‌ನ ಕೊಲೆ ಮಾಡಿದರೆ ಜಾಸ್ತಿ ಪರಿಹಾರ ಕೊಡುತ್ತಾರೆ. ಇಂತಹ ತಾರತಮ್ಯ ಯಾಕೆ, ಇಂತಹ ವರ್ತನೆಯಿಂದ ಮತ ಕ್ರೋಢೀಕರಣ ಆಗುತ್ತೆ ಎಂಬ ಬಿಜೆಪಿ ಲೆಕ್ಕ ಉಲ್ಟಾ ಆಗುತ್ತೆ ನೋಡಿ ಎಂದು ಟಾಂಗ್ ನೀಡಿದರು.

ಕಾಗೇರಿ ಅವರು ಸಭಾಧ್ಯಕ್ಷರ ಕುರ್ಚಿಯಲ್ಲಿ  ಕುಳಿತು  ನಮ್ಮ ಆರ್ ಎಸ್ ಎಸ್ ಅಂದಿದ್ದು ತಪ್ಪು, ಸ್ಪೀಕರ್ ಆದ ತಕ್ಷಣ ಅವರು ಪಕ್ಷಾತೀತರಾಗಿ ಇರಬೇಕು. ಆದರೆ ಅವರು ಗುರುವಾರ ನಮ್ಮ ಆರ್ ಎಸ್ ಎಸ್ ಅಂದಿದ್ದು ಸರಿಯಲ್ಲ ಎಂದು ಹೇಳಿದರು.

ನಾವು ಯಾವಾಗಲೂ ಆರ್.ಎಸ್.ಎಸ್ ಗೆ ವಿರೋಧ. ಏಕೆಂದರೆ ಆರ್.ಎಸ್.ಎಸ್ ನದ್ದು ಮನುವಾದ ಸಂಸ್ಕೃತಿ. ಸ್ವಾತಂತ್ರ್ಯಕ್ಕೆ ಆರ್ ಎಸ್ ಎಸ್ ಹೋರಾಡಿಲ್ಲ.‌ ಸಮಾಜ ಒಡೆಯುವುದೇ ಆರ್.ಎಸ್.ಎಸ್ ಅಜೆಂಡಾ ಇದಕ್ಕೆ ನಾನು ಆರ್.ಎಸ್.ಎಸ್ ವಿರೋಧಿಸುತ್ತೇನೆ ಎಂದು ಸಿದ್ದರಾಮಯ್ಯ  ತಿಳಿಸಿದರು.

ಸ್ವಾಮೀಜಿಗಳ ಆಕ್ರೋಶ: ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಲ್ವಾ ಎಂಬ ಸಿದ್ದರಾಮಯ್ಯ ಹೇಳಿಕೆ ಗೊತ್ತಾಗುತ್ತಿದ್ದಂತೆ ಹಲವಾರು ಸ್ವಾಮೀಜಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಸಿದ್ದರಾಮಯ್ಯ ಸ್ವಾಮೀಜಿಗಳ ಕ್ಷಮೆ ಯಾಚಿಸಬೇಕೆಂಬ ಒತ್ತಡ ಕೂಡಾ ಪ್ರಾರಂಭವಾಗಿದೆ.