ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ಹಿಜಾಬ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಬಿಜೆಪಿ ಕಿಡಿಕಾರಿದೆ.

ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದಿರಿ, ನ್ಯಾಯಾಲಯ ನಿಮ್ಮ ಹೇಳಿಕೆಗೆ ವಿರುದ್ಧವಾದ ತೀರ್ಪು ನೀಡಿತು. ರಾಷ್ಟ್ರಧ್ವಜವೇ ಇರದ ಸ್ತಂಭದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾರೆ ಎಂಬ ಸುಳ್ಳು ಹೇಳಿದಿರಿ ಎಂದು ಬಿಜೆಪಿ ಟ್ವಿಟ್ ಮಾಡಿ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯನವರೇ, ಓಲೈಕೆಗೂ ಒಂದು ಮಿತಿ ಇರುತ್ತದೆ. ನೀವು ಅದೆಲ್ಲವನ್ನೂ ದಾಟಿ ಸಾಗುತ್ತಿದ್ದೀರಿ. ಹಿಜಾಬ್, ದುಪ್ಪಟ್ಟ, ಮುಂಡಾಸು, ಪೇಟ ಇವುಗಳ ನಡುವಿನ ವ್ಯತ್ಯಾಸವನ್ನು ಮೊದಲು ಅರಿತುಕೊಳ್ಳಿ. ಹಿಜಾಬ್ ನಿಷೇಧಿಸಿಲ್ಲ, ತರಗತಿಯೊಳಗೆ ಹಿಜಾಬ್‍ಗೆ ಅವಕಾಶ ನಿರಾಕರಿಸಲಾಗಿದೆ, ಅಷ್ಟೇ. ಬುರುಡೆರಾಮಯ್ಯ ಎಂದು ಟ್ವೀಟ್ ಮಾಡಿದೆ.

ಹಿಜಾಬ್‍ಗೆ ಎಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವುದರ ಬಗ್ಗೆಯೇ ಸಿದ್ದರಾಮಯ್ಯ ಅವರಿಗೆ ಗೊಂದಲವಿದೆ. ಹಾದಿಬೀದಿಯಲ್ಲಿ, ಕಾಲೇಜಿನ ಆವರಣದಲ್ಲಿ ಹಿಜಾಬ್ ನಿಷೇಧಿಸಿಲ್ಲ. ವಸ್ತ್ರಸಂಹಿತೆಯ ಪ್ರಕಾರ ತರಗತಿಯಲ್ಲಿ ಅವಕಾಶ ನೀಡಿಲ್ಲ. ಹಿಜಾಬ್ ಒಳಗೆ ಅಡಗಿರುವ ಅಲ್ಪ ಮತಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದೆ.

ಹಿಜಾಬ್‍ಗೂ ಹಿಂದೂ ಸ್ವಾಮೀಜಿಗಳಿಗೂ ಏನು ಸಂಬಂಧ ಸಿದ್ದರಾಮಯ್ಯನವರೇ  ಮತ ಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವ ಭರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುತ್ತಿದ್ದೀರಿ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.