ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಮತ್ತು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಅನೇಕ ಮುಖಂಡರ ನೇತೃತ್ವ ವಹಿಸಿದ್ದರು.
ಪಾದಯಾತ್ರೆ ಮೂಲಕ ತೆರಳಿ ಮುತ್ತಿಗೆ ಹಾಕಲೆತ್ನಿಸಿದ ಕಾಂಗ್ರೆಸ್ ನಾಯಕರನ್ನು ಪಂಡಿತಾರಾಧ್ಯ ವೃತ್ತದ ಬಳಿಯೇ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮುಂದೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಪಟ್ಟು ಹಿಡಿದರು.
ಈ ವೇಳೆ ಡಿ.ಕೆ.ಶಿವಕುಮಾರ್ ಬ್ಯಾರಿಕೇಡ್ ಹತ್ತಿ ಆ ಕಡೆ ಜಿಗಿಯುವ ಮೂಲಕ ಮುಖ್ಯಮಂತ್ರಿ ಅವರ ಮನೆಯತ್ತ ನುಗ್ಗಲೆಯತ್ನಿಸಿದರು. ಸಲೀಂ ಅಹಮ್ಮದ್, ಸುರ್ಜೆವಾಲ ಅವರು ಸಾಥ್ ನೀಡಿದರು.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲ ಸೇರಿದಂತೆ ಅನೇಕ ನಾಯಕರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.
ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಶೇ.40ರಷ್ಟು ಕಮಿಷನ್ ಕೇಳಿದ್ದರಿಂದಾಗಿಯೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಭ್ರಷ್ಟಾಚಾರ ಈ ಹಿಂದೇನೂ ಇರಬಹುದು. ಆದರೆ, ಶೇ.40ರಷ್ಟು ಕಮಿಷನ್ ಹಿಂದೆಂದೂ ಇರಲಿಲ್ಲ. ಸಂತೋಷ್ 4 ಕೋಟಿ ಕಾಮಗಾರಿ ಮಾಡಲು ಸಾಲ ಮಾಡಿಕೊಂಡಿದ್ದರು. ಅದರ ಮೇಲೆ ಶೇ.40ರಷ್ಟು ಕಮಿಷನ್ ನೀಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಂತೋಷ್ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಈಶ್ವರಪ್ಪ ಮತ್ತು ಅವರ ಸಂಗಡಿಗರ ವಿರುದ್ಧ ಪ್ರಕರಣ ದಾಖಲಾಗಬೇಕು ಮತ್ತು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಬಂಧಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಏಳು ತಂಡಗಳನ್ನು ರಚಿಸಿದ್ದು, ನಾಳೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಐದು ದಿನಗಳ ವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಸಂತೋಷ್ ಪಾಟೀಲ್ ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದರು. ಆದರೆ, ಅವರದೇ ಪಕ್ಷದ ಕಾರ್ಯಕರ್ತರೂ ಆಗಿರುವ ಗ್ರಾಪಂ ಅಧ್ಯಕ್ಷ ಲೋಕೇಶ್ ಸಾಕ್ಷ್ಯ ಹೇಳಿರುವ ಪ್ರಕಾರ, ಸಚಿವ ಈಶ್ವರಪ್ಪ ಅವರನ್ನು ಸಂತೋಷ್ ಹಲವು ಬಾರಿ ಭೇಟಿ ಮಾಡಿದ್ದಾರೆ.
ಈ ವೇಳೆ ಕಾಮಗಾರಿ ಕೈಗೊಳ್ಳಲು ಸಚಿವರು ಮೌಖಿಕ ಆದೇಶ ನೀಡಿದ್ದಾರೆ. ಅದರ ಪ್ರಕಾರ ಸಂತೋಷ್ ತಮ್ಮ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ನಿರ್ವಹಣೆ ಮಾಡಿದ್ದಾರೆ. ಈಗ ಈಶ್ವರಪ್ಪ ಸಂತೋಷ್ ಯಾರು ಗೊತ್ತೇ ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಒಪ್ಪತಕ್ಕದ್ದಲ್ಲ ಎಂದು ಹೇಳಿದರು.
ಸಂತೋಷ್ ಕಾಮಗಾರಿ ಆರಂಭ ಮಾಡುವ ಮುನ್ನ ಅಲ್ಲಿ ಬ್ಯಾನರ್ ಹಾಕಿ ಸ್ಥಳೀಯ ಅಕಾರಿಗಳಿಂದ ಪೂಜೆ ಮಾಡಿಸಿದ್ದಾರೆ. ಅಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇದೆ.
ಈ ಪ್ರಕರಣ ನ್ಯಾಯಾಲಯದ ಉಸ್ತುವಾರಿಯಲ್ಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಕಾಂಗ್ರೆಸ್ ಇಂದಿನಿಂದ ಅಭಿಯಾನ ಪ್ರಾರಂಭಿಸುತ್ತಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದರು.
ಇದು ರಾಜಕೀಯ ಹೋರಾಟವಲ್ಲ. ಭ್ರಷ್ಟಾಚಾರದ ವಿರುದ್ಧ ಸಂಘರ್ಷ. ರಾಜ್ಯದ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ವಿಧಾನಸೌಧದಲ್ಲಿ ಅಹೋ ರಾತ್ರಿ ಧರಣಿ ಮಾಡಲು ನಿರ್ಧರಿಸಿದೆ.

