ಕಾನೂನು ಕೈಗೆತ್ತಿಕೊಳ್ಳುವವರು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯ ಕ್ರಮ -ಸಿಎಂ

ಬೆಂಗಳೂರು: ಕಾನೂನು ಕೈಗೆತ್ತಿಕೊಳ್ಳುವವರು ಎಂತವರೇ ಆಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಈ ನೆಲದ ಕಾನೂನಿನಲ್ಲಿ ಪ್ರತಿಯೊಬ್ಬ ನಾಗರಿಕರೂ ಸಮಾನರು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರುವುದಿಲ್ಲ. ಯಾವುದೇ ಸಂಘಟನೆ ಇರಲಿ, ಯಾವುದೇ ಧರ್ಮದವರಿರಲಿ ತಪ್ಪಾಗಿದ್ದರೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವರು ಕಾನೂನಿಗಿಂತ ತಾವೇ ದೊಡ್ಡವರೆಂದು ತಿಳಿದುಕೊಂಡಿದ್ದಾರೆ. ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ಹೇಳಿದರು.

ಯಾರಿಗೆ, ಯಾವ ಸಂದರ್ಭದಲ್ಲಿ ಏನು ಕ್ರಮ ಜರುಗಿಸಬೇಕೋ ಜರುಗಿಸುತ್ತೇವೆ. ಸರ್ಕಾರದೊಂದಿಗೆ ಹುಡುಗಾಟಿಕೆ ಆಡಿದರೆ ಸುಮ್ಮನಿರುವುದಿಲ್ಲ ಎಂದು ಖಡಕ್ ಆಗಿ ನೀಡಿದರು.

ಘಟನೆ ಕುರಿತಂತೆ ಈಗಾಗಲೇ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ಬಿಡುವುದಿಲ್ಲ. ಪೊಲೀಸರಿಗೆ ಮುಕ್ತವಾಗಿ ತನಿಖೆ ನಡೆಸಲು ಸೂಚನೆ ಕೊಟ್ಟಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.