ದೆಹಲಿಯಲ್ಲೂ ಬುಲ್ಡೋಜರ್ ಅಬ್ಬರ

ನವದೆಹಲಿ: ಉತ್ತರ ಪ್ರದೇಶ, ಮದ್ಯ ಪ್ರದೇಶ ನಂತರ ದೆಹಲಿಯಲ್ಲೂ ಬುಲ್ಡೋಜರ್ ಅಬ್ಬರ ಶುರುವಾಗಿದ್ದು ಹಲವರಿಗೆ ನಡುಕ ಪ್ರಾರಂಭವಾಗಿದೆ

ಇಲ್ಲಿನ ಜಹಾಂಗೀರ್ ಪುರಿ ಯಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದ ಕೆಲವು ದಿನಗಳ ನಂತರ, ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (NDMC) ಏಪ್ರಿಲ್ 20 ಮತ್ತು 21 ರಂದು ವಿಶೇಷ ಜಂಟಿ ಅತಿಕ್ರಮಣ ತೆರವು  ಕಾರ್ಯವನ್ನು ಘೋಷಿಸಿದೆ.

ಗಲಭೆಯ ಆರೋಪಿಗಳ ಮನೆ ಮತ್ತು ಆಸ್ತಿಗಳನ್ನು ಕೆಡವಲು ಬುಲ್ಡೋಜರ್‍ಗಳ ಬಳಕೆಯು ಮೊದಲು ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಪ್ರಾರಂಭವಾಯಿತು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪರಾಧಿಗಳ ಅಕ್ರಮ ಆಸ್ತಿಯನ್ನು ಧ್ವಂಸಗೊಳಿಸಿ ಅದನ್ನು ಸ್ಟಾಂಪ್ ಆಗಿ ಪ್ರಚಾರ ಮಾಡಿದ್ದಕ್ಕಾಗಿ ಅವರು ಬುಲ್ಡೋಜರ್ ಬಾಬಾ ಎಂದೇ ಹೆಸರು ಗಳಿಸಿದ್ದಾರೆ.

ಶನಿವಾರ ಹನುಮ ಜಯಂತಿಯಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರ ಸಂಭವಿಸಿದ ನಂತರ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಜಹಾಂಗೀರ್ಪುರಿಯಲ್ಲಿ ಅತಿಕ್ರಮಣ ತೆರವು ಅಭಿಯಾನವನ್ನು ಆರಂಭಿಸಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿ ಪೊಲೀಸರಿಗೆ ಕನಿಷ್ಠ 400 ಸಿಬ್ಬಂದಿಯನ್ನು ನಿಯೋಜಿಸುವಂತೆ ಮನವಿ ಮಾಡಿದೆ.

ಬುಧವಾರ ಬೆಳಗ್ಗೆ ವಿಶೇಷ ಪೊಲೀಸ್ ಆಯುಕ್ತ ದೇವೇಂದ್ರ ಪಾಠಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಗೆ ಮುನ್ನ ಪ್ರದೇಶದ ಪರಿಶೀಲನೆ ನಡೆಸಿದರು.

ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಜಹಾಂಗೀರ್ಪುರಿಯಲ್ಲಿ ಗಲಭೆಕೋರರ ಅಕ್ರಮ ನಿರ್ಮಾಣಗಳನ್ನು ಗುರುತಿಸಿ ಅವುಗಳನ್ನು ಕೆಡವಲು ಉತ್ತರ  ‌ಕಾರ್ಪೊರೇಷನ್ ಮೇಯರ್ ಗೆ ಪತ್ರ ಬರೆದಿದ್ದಾರೆ.

ತೆರವು ಕಾರ್ಯಾಚರಣೆಗೆ ತಡೆ: ದೆಹಲಿಯ ಜಹಾಂಗೀರ್ ಪುರಿಯಲ್ಲಿ ಮತ್ತೊಂದು ಮಹತ್ವದ ಬೆಳವಣಿ ನಡೆದಿದ್ದು, ಒತ್ತುವರಿದಾರರ ಮನೆ ತೆರವು ಕಾರ್ಯಾಚರಣೆ ಮಾಡದಂತೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಬುಧವಾರ ಮುಂಜಾನೆಯಿಂದ ಶುರುವಾದ ಕಾರ್ಯಾಚರಣೆಯಲ್ಲಿ ಹಲವಾರು ಅಕ್ರಮ ನಿರ್ಮಾಣಗಳನ್ನು ಧ್ವಂಸಗೊಳಿಸಲಾಗಿದೆ.

ಈ ನಡುವೆ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.