ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವುದೇ ಆಮ್ ಆದ್ಮಿ ಪಾರ್ಟಿಯ ಗುರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ರೈತ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮೊದಲು ದೆಹಲಿಯಲ್ಲಿ ಸರ್ಕಾರ ರಚನೆಯಾಯಿತು. ನಂತರ ಪಂಜಾಬ್‍ನಲ್ಲಿ ಈಗ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಈ ಮೊದಲು ಕರ್ನಾಟಕದಲ್ಲಿ 20 ಪರ್ಸೆಂಟ್ ಸರ್ಕಾರ ಇತ್ತು. ಈಗ 40 ಪರ್ಸೆಂಟ್ ಸರ್ಕಾರ ಇದೆ. ಆದರೆ, ದೆಹಲಿಯಲ್ಲಿ 0 ಪರ್ಸೆಂಟ್ ಸರ್ಕಾರ ಇದೆ. ಇದನ್ನು ನಮ್ಮ ಪ್ರಧಾನಿಯವರೇ ಸಾಬೀತು ಮಾಡಿದ್ದಾರೆ ಎಂದು ಹೇಳಿದರು.
ನನ್ನ ಮನೆ ಮೇಲೆ ಸಿಬಿಐ, ಐಟಿ ಎಲ್ಲಾ ದಾಳಿ ಮಾಡಿದರೂ ಏನೂ ಸಿಗಲಿಲ್ಲ. ನಮ್ಮ ಪಕ್ಷದ ಮನಿಶ್ ಸಿಸೋಡಿಯಾ ಸೇರಿದಂತೆ ಶಾಸಕರ ಮನೆಗಳ ಮೇಲೂ ಕೂಡ ದಾಳಿ ಆಯಿತು. ಏನೂ ದೊರೆಯಲಿಲ್ಲ. ನಮ್ಮದು 0 ಪರ್ಸೆಂಟ್ ಸರ್ಕಾರ ಎಂದು ತಿಳಿಸಿದರು.
ನಾನು ಒಬ್ಬ ಆಮ್‍ಆದ್ಮಿ. ನನಗೆ ರಾಜಕಾರಣ ಮಾಡಲು ಬರುವುದಿಲ್ಲ. ಆದರೆ, ಜನ ಸಾಮಾನ್ಯರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದರು.
ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಸ್ಥಿತಿಯಲ್ಲಿವೆ. ಶೇ.99.7 ಫಲಿತಾಂಶ ಬಂದಿದೆ. ನಾಲ್ಕು ಲಕ್ಷ ಮಕ್ಕಳು ಖಾಸಗಿಯಿಂದ ಸರ್ಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ನಮಗೆ ಗೂಂಡಾಗಿರಿ ಮಾಡಲು ಬರುವುದಿಲ್ಲ. ನಮ್ಮದು ದೇಶ ಭಕ್ತಿಯ ಪಕ್ಷ. ನಮಗೆ ಶಾಲೆ ಕಟ್ಟಲು ಬರುತ್ತದೆ. ದಂಧೆ, ಗೂಂಡಾಗಿರಿ ಬೇಕೆಂದರೆ ಬಿಜೆಪಿಗೆ ವೋಟು ನೀಡಿ. ಶಾಲೆ, ಆಸ್ಪತ್ರೆ, ರಸ್ತೆ ಬೇಕಾದರೆ ನಮಗೆ ವೋಟು ನೀಡಿ ಎಂದು ಕೇಜ್ರಿವಾಲ್ ಕರೆ ನೀಡಿದರು.

