ತೆಲಂಗಾಣದಲ್ಲಿ ಬಸವ ಜಯಂತಿ ಆಚರಣೆ: ಲಿಂಗಾಯಿತ ಗೌಡ ಮಹಾಸಭಾ ಸ್ವಾಗತ

ಮೈಸೂರು: ಮಹಾನ್ ಕ್ರಾಂತಿ ಪುರುಷ ಬಸವಣ್ಣ ನವರ ಜಯಂತಿ ಆಚರಿಸುವ ಕುರಿತು ಆದೇಶ ಹೊರಡಿಸಿ ಗೌರವಿಸಿರುವ ತೆಲಂಗಾಣ ಸರ್ಕಾರದ ನಿರ್ಧಾರವನ್ನು ಲಿಂಗಾಯಿತ ಗೌಡ ಮಹಾಸಭಾದ ರಾಜ್ಯ ಕಾರ್ಯದರ್ಶಿ ಕೇಬಲ್ ಮಹೇಶ್ ಸ್ವಾಗತಿಸಿದ್ದಾರೆ.

12ನೇ ಶತಮಾನದ ಮಹಾನ್ ಕ್ರಾಂತಿ ಪುರುಷ  ಬಸವಣ್ಣನವರ  ಜಯಂತಿ ಆಚರಣೆಗೆ ಆದೇಶ ಹೊರಡಿಸುವ ಮೂಲಕ ತೆಲಂಗಾಣ ಸರ್ಕಾರವು  ಅಣ್ಣ ಬಸವಣ್ಣ ನವರನ್ನು   ಗೌರವಿಸಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.

ಬಸವ ಜಯಂತಿ ಆಚರಣೆ ಸಂಬಂಧ ತೆಲಂಗಾಣ ಸರ್ಕಾರ ಈಗಾಗಲೇ ಭಾಷೆ ಮತ್ತು ಸಂಸ್ಕೃತಿ ಇಲಾಖೆಗೆ ಆದೇಶ ಹೊರಡಿಸಿದೆ.

ತೆಲಂಗಾಣದಲ್ಲಿ ಬಸವ ಅನುಯಾಯಿಗಳು ಅಧಿಕ ಸಂಖ್ಯೆಯಲ್ಲಿದ್ದು, ಅಲ್ಲಿನ ಸರ್ಕಾರದ ನಿರ್ಧಾರ ದೇಶದೆಲ್ಲೆಡೆ ಬಸವ ಭಕ್ತರಿಗೆ ಸಂತಸ ಉಂಟು ಮಾಡಿದೆ ಎಂದು ಕೇಬಲ್ ಮಹೇಶ್ ತಿಳಿಸಿದ್ದಾರೆ.

ಬಸವಣ್ಣನವರ ತತ್ವಗಳು ವಿಶ್ವಾದ್ಯಂತ ಪ್ರಚಾರವಾಗಬೇಕಾಗಿದೆ. ಬಸವ ಜಯಂತಿ ಆಚರಿಸಲು ಆದೇಶ ಹೊರಡಿಸಿದ್ದಕ್ಕೆ ತೆಲಂಗಾಣ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಲಿಂಗಾಯಿತ ಗೌಡ ಮಹಾಸಭಾದಿಂದ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.